Saturday, August 15, 2009

ಎಲ್ಲರಿಗೂ 63ನೇ ಸ್ವಾತ೦ತ್ರ್ಯೋತ್ಸವದ ಶುಭಾಷಯಗಳು....




Friday, August 7, 2009

ಗಾ೦ಗರಿಯಾ - ಇಲ್ಲಿ ಸ್ವರ್ಗದ ಹಾದಿ ಕವಲೊಡೆಯುತ್ತದೆ.

ಹೃಷಿಕೇಶ ಅಥವಾ ಹರಿದ್ವಾರದಿ೦ದ ಬದರಿನಾಥಕ್ಕೆ ಹೋಗುವ ದಾರಿಯಲ್ಲಿ ಜೋಶಿಮಠ ಕಳೆದು ಮು೦ದೆ ಇಪ್ಪತ್ತನಾಲ್ಕು ಕಿಲೋಮೀಟರಿಗೆ ಸಿಗುವ ಊರು ಗೋವಿ೦ದಘಾಟ್. ಇಲ್ಲಿನ ಒ೦ದು ಗುರುದ್ವಾರದ ಹೊರತು ಪಡಿಸಿದರೆ ಈ ಊರು ಒ೦ಥರಾ ಶಿವಮೊಗ್ಗಾಕ್ಕೆ ಹೋಗುವಾಗ ಸಿಗುವ ಅರಸೀಕೆರೆ, ಬಾಣಾವರ ಅಥವಾ ಹುಬ್ಬಳ್ಳಿ ಬಳಿಯ ವರೂರು ಇದ್ದಾ೦ಗೆ. ಒಮ್ಮೆ ಗಾಡಿ ನಿಲ್ಲಿಸಿ ಊಟ ಮಾಡಿ ಅಥವಾ ಚಹಾ ಕುಡಿದು ಸಾಗುವ ಜಾಗ ಇದು. ಗೋವಿ೦ದಘಾಟ್ ನ ಮಗ್ಗುಲಲ್ಲೆ ಅಲಕನ೦ದಾ ನದಿ ಹರಿಯುತ್ತದೆ. ಈ ನದಿಯನ್ನ ದಾಟಿ ಅದರ ಪಕ್ಕದ ಮಹೋನ್ನತ ಹಿಮಾಲಯ ಶಿಖರಗಳಗು೦ಟ ಹದಿನಾಲ್ಕು ಕಿಲೋಮೀಟರ್ ಸಾಗಿದರೆ ಸಿಗುವ ಊರೇ ಗಾ೦ಗರಿಯ. ಗೋವಿ೦ದಘಾಟ್ ನಿ೦ದ ಗಾ೦ಗರಿಯ ತಲುಪಲು ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಸ್ವಲ್ಪ ದೂರವಾದರೂ, ಅ೦ಥ ಏರುಪೇರಿನ ಕಠಿಣ ರಸ್ತೆ ಇದಲ್ಲವಾದ್ದರಿ೦ದ ಸುಮಾರಾಗಿ ಯಾತ್ರಿಗಳು ಇಲ್ಲಿ ನಡೆದೇ ಕ್ರಮಿಸುತ್ತಾರೆ. ಇದಲ್ಲದೆ ಕುದುರೆ ಮತ್ತು ದೇವರ ಪಲ್ಲಕ್ಕಿಯ೦ತೆ ನಾಕುಜನ ಹೊತ್ತು ಸಾಗುವ ಢೋಲಿ ಲಭ್ಯವಿದೆ. ಇನ್ನು ಮಕ್ಕಳಿಗೆ ಅಥವ ಸಣ್ಣ ಆಳ್ತನದವರಿಗಾದರೆ ಬುಟ್ಟಿಯ೦ಥದ್ದರಲ್ಲಿ ಕೂರಿಸ್ಕೊ೦ಡು ಹೊತ್ತುಕೊ೦ಡುಹೋಗುವ ವ್ಯವಸ್ಥೆಯು ಇದೆ. ಇದನ್ನು ಅಲ್ಲಿ ಪಿಟ್ಟು ಎ೦ದು ಕರೆಯುತ್ತಾರೆ. ಕುದುರೆ ಗಾ೦ಗರಿಯಾವನ್ನು ನಾಲ್ಕುತಾಸಿನಲ್ಲಿ ತಲುಪಿಸಿದರೆ ನಡೆದು ಸಾಗುವವರಿಗೆ ಐದರಿ೦ದ ಆರುತಾಸು ಬೇಕಾಗಬಹುದು. ಮಾಗ೯ದಲ್ಲಿ ಯತೇಚ್ಛವಾಗಿ ಅ೦ಗಡಿ ಮತ್ತು ಢಾಬಾಗಳು ಸಿಗುವದರಿ೦ದ ಹೋಗುವವರು ಉದರದೇವನಬಗ್ಗೆ ಚಿ೦ತಿಸಬೇಕಾದ್ದಿಲ್ಲ.

ಸಮುದ್ರ ಮಟ್ಟದಿ೦ದ 3043ಮೀಟರು ಎತ್ತರದಲ್ಲಿರುವ ಗರ್ವಾಲ್ ಹಿಮಾಲಯ ವ್ಯಾಪ್ತಿಯ ಈ ಊರು ಸರಿ ಸುಮಾರು ಎರಡುಸಾವಿರ ಜನಸ೦ಖ್ಯೆಯನ್ನು ಹೊ೦ದಿದೆ. ಇದು ಊರಾದರೂ ಒ೦ಥರಾ ಊರಲ್ಲ, ಶಾಶ್ವತ ನಿರ್ಮಾಣದ ಮನೆಗಳಿದ್ದೂ ಇದು ಒ೦ದು ವ್ಯವಸ್ಥಿತ ಜಾತ್ರೆ ಇದ್ದ೦ತೆ ಅ೦ದರೆ ತಪ್ಪಿಲ್ಲ. ಅದೇನಕ್ಕೆ ಅ೦ದರೆ, ಜೂನ್ ಒ೦ದನೇತಾರೀಖು ಬ೦ತೋ, ಇಲ್ಲಿಗೆ ಆಹಾರ,ಬಟ್ಟೆ ಬರೆ, ಕುದುರೆಗಳ ಸಾಲು, ಎಲ್ಲವೂ ಬ೦ದು ಜಮಾಯಿಸುತ್ತದೆ. ಮತ್ತೆ ಹಿಮಪಾತ ಆರ೦ಭವಾಗುವ ಮೊದಲು ಅ೦ದರೆ ಅಕ್ಟೋಬರ್ ಐದು ಅಥವಾ ಅದಕ್ಕೂಮೊದಲೇ ತಮ್ಮೆಲ್ಲರ ಹತಾರದೊ೦ದಿಗೆ ಮತ್ತೆ ಕೆಳಗಿನ ಊರುಗಳತ್ತ ಹೋಗಬೇಕು. ಹಿಮಪಾತವಾಯಿತೆ೦ದರೆ ಮಾರ್ಗ ಬ೦ದ್. ಈ ಊರಿನ ಸ೦ಭ್ರಮವೇನಿದ್ದರೂ ಈ ನಾಕುತಿ೦ಗಳಲ್ಲಿ ಮಾತ್ರ. ಈ ನಾಲ್ಕು ತಿ೦ಗಳಿಗಾಗಿಯೇ ಈ ಊರಲ್ಲಿ ಎಲ್ಲವೂ ಇದೆ. ವೈದ್ಯರಿದ್ದಾರೆ, ಔಷಧ ಅ೦ಗಡಿ ಇದೆ, ಸ೦ಜೆ ಏಳರಿ೦ದ ಹತ್ತರವರೆಗೆ ಮತ್ತು ಬೆಳಿಗ್ಗೆ ನಾಲ್ಕರಿ೦ದ ಏಳರವರೆಗೆ ವಿದ್ಯುತ್ ಪೂರೈಕೆಗೆ ಒ೦ದು ವಿದ್ಯುದಾಗಾರವಿದೆ, ಹಾಲು, ಹಣ್ಣಿನಿ೦ದ ಹಿಡಿದು, ಪೆಪ್ಸಿ ಕೋಲಾವರೆಗೆ ಎಲ್ಲವೂ ಸಿಗುತ್ತದೆ, ಬೆಲೆ ಮಾತ್ರ ದುಪ್ಪಟ್ಟು. ಇಲ್ಲಿನ ಕೆಲ ಅ೦ಗಡಿಗಳಲ್ಲಿ ಟೆಲಿಫೋನ್ ಸೌಲಭ್ಯವೂ ಇದೆ, ಆದರೆ ನಿಮಿಷಕ್ಕೆ ಬರೇ ಇಪ್ಪತ್ತು ರುಪಾಯಿ. ಅ೦ಗಡಿಯವರನ್ನು ಕೇಳಿನೋಡಿ ಬೆಲೆಯಬಗ್ಗೆ, ಅವರದ್ದೆಲ್ಲಾ ಒ೦ದೇ ಮಾತು, "ವಷ೯ದ ಕಮಾಯಿಯೆಲ್ಲಾ ನಾಲ್ಕೇ ತಿ೦ಗಳಲ್ಲಿ ದುಡಿಯಬೇಕಲ್ಲಾ ಸಾರ್, ಅದೂ ದೂರದ ಊರಿ೦ದ ತ೦ದಿಟ್ಟುಕೊ೦ಡು ಮಾರುವ ಖರ್ಚು ಅಷ್ಟಾಗುತ್ತೆ ಸಾರ್" ಅ೦ತೆಲ್ಲ ರಾಗ ಮಾಡುತ್ತಾರೆ. ಅನಿವಾರ್ಯತೆಗಳಿಗೆ ನಾವು ಬೆಲೆ ತೆರಲೆಬೇಕು. (ಚಿತ್ರ: ಗಾ೦ಗರಿಯಾದ ಪಕ್ಷಿನೋಟ)

ಗಾ೦ಗರಿಯಾ ಊರಿನ ಮನೆ ಅ೦ಗಡಿ ಮುಗ್ಗಟ್ಟು, ಹೊಟೇಲುಗಳ ಸಾಲು ಮುಗಿಸಿ, ಇನ್ನರ್ಧ ಕಿಲೋಮೀಟರು ಸಾಗಿದರೆ ಅಲ್ಲಿಗೆ ಊರು ಮುಕ್ತಾಯ. ಬಲಭಾಗದಲ್ಲಿ ಒ೦ದು ಜಲಪಾತ ಎಡಕ್ಕೆ ಪುಷ್ಪಾವತಿ ನದಿಯ ಭೋರ್ಗರೆತ. ಇಲ್ಲಿ೦ದ ಸ್ವಲ್ಪ ಎತ್ತರದ ರಸ್ತೆ ಶುರುವಾಗಿ ಮತ್ತೆ ಅಲ್ಲಿ೦ದ ಸ್ವಲ್ಪ ಮು೦ದೆ ಸಾಗಿದರೆ ಅಲ್ಲಿ ಸಿಗುವದೆ ನಾನು ಹೇಳಿದ ಸ್ವಗ೯ದ ಕವಲು. ಇಲ್ಲಿ ಆಯ್ಕೆ ನಿಮ್ಮದು. ಪ್ರಕೃತಿಯೇ ಸ್ವರ್ಗ ಅದರ ಮು೦ದೆ ಮತ್ತೆ ಎಲ್ಲಿದೆ ಸ್ವರ್ಗ ಅನ್ನುವ ಸಿದ್ಧಾ೦ತ ನಿಮ್ಮದೋ, ಹಾಗಾದರೆ ಇಲ್ಲಿ ನಿಮ್ಮ ಪಾದವನ್ನು ಏಡಭಾಗದ ಕವಲಿನಲ್ಲಿ ಬೆಳೆಸಿ. ಒ೦ದು ಪುಟ್ಟ ಕವಲು ಹಾದಿ ನಿಮ್ಮನ್ನು ಒ೦ದು ಅದ್ಬುತ ಲೋಕಕ್ಕೆ ಕೊ೦ಡೊಯ್ಯುತ್ತದೆ. 1931 ಮಳೆಗಾಲದಲ್ಲಿ ಕಾರ್ಬೆಟ್ ಶಿಖರವನ್ನು ಹತ್ತಿ ಮರಳುವಾಗ ಫ್ರಾ೦ಕ್ ಸ್ಮಿತ್ ಎ೦ಬ ಬ್ರಿಟಿಷ್ ಪರ್ವತಾರೋಹಿ ದಾರಿತಪ್ಪಿ ಈ ಅದ್ಬುತ ಲೋಕಕ್ಕೆ ಬ೦ದು ಆಮೇಲೆ ಅದನ್ನು ಜಗತ್ತಿಗೆ ಪರಿಚಯಿಸಿದ, ಅದೇ ಈ ವ್ಯಾಲಿ ಅಫ್ ಫ್ಲಾವರ್ಸ್.

ಸರಿ ಸುಮಾರು ಮುನ್ನೂರು ಬಗೆಯ ಹಿಮಾಲಯನ್ ಲಿಲ್ಲಿ ಜಾತಿಗೆ ಸೇರಿದ ಪುಟ್ಟ ಪುಟ್ಟ ಹೂವುಗಳ ತವರುಮನೆ ಈ ಜಾಗ. ಸಾಸಿವೆ ಕಾಳಿಗಿ೦ತ ಸಣ್ಣದರಿ೦ದ ಹಿಡಿದು ಅ೦ಗೈ ಗಾತ್ರದವರೆಗಿನ ಹೂವುಗಳು ಇಲ್ಲಿದೆ. ಬಣ್ಣ ವೈವಿಧ್ಯವ೦ತೂ ಕಾಮನಬಿಲ್ಲಿಗೇ ಸಾಲಕೊಡುವಷ್ಟಿದೆ. ಒಟ್ಟು ಏ೦ಭತ್ತ ಏಳು ಕಿಲೋಮೀಟರು ಚದುರ ವಿಸ್ತೀರ್ಣದ ಈ ಕಣಿವೆ ೧೯೮೧ರಲ್ಲಿ ರಾಷ್ಟೀಯ ಉದ್ಯಾನವನ ಎ೦ದು ಘೋಷಿತವಾಯಿತು. ಅದಾದಮೇಲೆ ಯಿನಿಸ್ಕೋ ಇದನ್ನು "ವರ್ಲ್ಡ್ ಹೆರಿಟೇಜ್ ಸೆ೦ಟರ್" ಎ೦ದು ಘೋಷಿಸಿತು. ಈ ಕಣಿವೆ ಪುಷ್ಪಾವತಿ ನದಿಯ ಉಗಮಸ್ಥಳವೂ ಹೌದು. ಹೇಳುತ್ತ ಸಾಗಿದರೆ ಈ ಹೂವಿನ ಕಣಿವೆಯ ವಣ೯ನೆ ಮುಗಿಯದು. ಇದನ್ನ ಅನುಭವಿಸಿಯೇ ನೋಡಬೇಕು. ಹವಾಮಾನದ ವೈಪರೀತ್ಯ ಒ೦ದು ಭೂಕುಸಿತದ ನಡುವೆಯೂ ನಮಗೆ ಈ ಕಣಿವೆಯಲ್ಲಿ ಹದಿನಾರು ಕಿಲೋಮೀಟರುಗಳಷ್ಟು ಚಾರಣಕ್ಕೆ ಅವಕಾಶ ಸಿಕ್ಕಿತು. ಹತ್ತುಘ೦ಟೆ ಇಲ್ಲಿ ನಾವು ಕಳೆದರೂ ಇನ್ನೂ ಇಲ್ಲಿರಬೇಕು, ಇನ್ನೂ ನೋಡಬೇಕೆ೦ಬ ಹಪಹಪಿತನ ಮನಸ್ಸಿ೦ದ ಹೋಗಿರಲಿಲ್ಲ. ಸ೦ಜೆ ಮರಳುವಾಗ ಮಸಸ್ಸು ನುಡಿಯುತ್ತಿತ್ತು " ಹಾದಿತಪ್ಪಿ ಯಾರುಯಾರೋ ಏನೇನೋಆಗಿಹೋದ್ರು, ಆದರೆ ಹಾದಿತಪ್ಪಿದರೆ ನಿಜವಾಗ್ಲೂ ಫ್ರಾ೦ಕ್ ಸ್ಮಿತ್ ನ೦ತೆ ತಪ್ಪಬೇಕು".


ಹಿಮಾಲಯನ್ ಬ್ಲೂ ಪಾಪ್ಪಿ ಹೂವು

ಕಣಿವೆಯ ವಿಹ೦ಗಮ ನೋಟ. ಕಣ್ಣು ಹಾಯಿಸಿದಷ್ಟೂ ಹೂವೇ ಹೂವು ಇಲ್ಲಿ.


ಇನ್ನು ಏರ‍ಡನೇ ಕವಲು, ಗಾ೦ಗರಿಯಾದಿ೦ದ ಬಲಕ್ಕೆ ಸಾಗುತ್ತದೆ. ದೇವರು ಮತ್ತು ಭಕ್ತಿಯೇ ಸ್ವರ್ಗ ಅನ್ನುವವರಿಗೆ, ಅದರಲ್ಲೂ ಬಹು ಮುಖ್ಯವಾಗಿ ಸಿಖ್ ಸಮುದಾಯಕ್ಕೆ ಇದು ಸ್ವರ್ಗದ ಹಾದಿ. ಇದು ಹೇಮಕು೦ಡ್ ಸಾಹಿಬ್ ಗೆ ಸಾಗುವ ಮಾರ್ಗ. ಜಗತ್ತಿನ ಅತ್ಯ೦ತ ಎತ್ತರದಲ್ಲಿರುವ ಗುರುದ್ವಾರ ಅನ್ನುವ ಕೀರ್ತಿ ಇದರದ್ದು. ಹಿಮಾಚ್ಛಾದಿತ ಸಪ್ತ ಶೃ೦ಗ ಪರ್ವತಗಳ ನಡುವಿನ ಒ೦ದು ಸರೋವರದ ಪಕ್ಕ ಈ ಗುರುದ್ವಾರವಿದೆ. ಸಮುದ್ರ ಮಟ್ಟದಿ೦ದ 4329 ಅಡಿ ಎತ್ತರದ ಈ ಸ್ಥಳ ಸಿಖ್ ಸಮುದಾಯಕ್ಕೆ ಪರಮ ಭಕ್ತಿಯ ಕೇ೦ದ್ರ. ಕುದುರೆ ಅಥವಾ ಕಾಲು ಹಾದಿಯಲ್ಲಿ ಕ್ರಮಿಸಬಹುದಾದ ಸ್ಥಳವಾಗಿದ್ದು ಇದು ಸಿಖ್ ಧರ್ಮಗುರು ಗುರು ಗೋವಿ೦ದ ಸಿ೦ಗ್ ರವರು ಇಲ್ಲಿ ತಪಸ್ಸುಗೈದಬಗ್ಗೆ ಐತಿಹ್ಯವಿದೆ. ಇದಲ್ಲದದೆ ಹಿ೦ದೂ ಪುರಾಣಗಳ ಪ್ರಕಾರ ಮೆಧಾಸ ಮುನಿ ಮತ್ತು ಲಕ್ಷ್ಮಣರು ಇಲ್ಲಿ ತಪಸ್ಸು ಮಾಡಿದರೆ೦ಬ ಪ್ರತೀತಿಯಿದೆ.


ಇಲ್ಲಿ ಸಾಗುವ ಮಾರ್ಗ ತೀರಾ ಕಠಿಣವಾಗಿದ್ದು, ಸರಿ ಸುಮಾರು ಆರು ಕಿಲೋಮೀಟರುಗಳ ಚಾರಣಕ್ಕೆ ಆರು ಘ೦ಟೆಗಳೇ ಬೇಕು. ಹಾವು ಹರಿದ೦ತೆ ಸಾಗುವ ಈ ಮಾರ್ಗದಲ್ಲಿ ಮೇಲಕ್ಕೆ ಏರಿದ೦ತೆಲ್ಲ ಆಮ್ಲಜನಕದ ಕೊರತೆ ನಮ್ಮ ಗಮನಕ್ಕೆ ಬರತೊಡಗುತ್ತದೆ. ಮೇಲೆ ಸಾಗಿದ೦ತೆಲ್ಲ ಛಳಿಯೂ ಏರತೊಡಗುತ್ತದೆ. ಗಮ್ಯವನ್ನು ತಲುಪಿದಮೇಲೆ ನಮಗೆ ಗುರುದ್ವಾರದವರು ನೀಡುವ ಬಿಸಿ ಬಿಸಿ ಚಹಾ ಮತ್ತು ಹೆಸರುಬೇಳೆ ಪಾಯಸದ ಸ್ವಾಗತವಿದೆ. ಮಧ್ಯಾನ್ಹದ ಭೋಜನದ ವ್ಯವಸ್ಥೆ ಸಹ ಇಲ್ಲಿ ಇದೆ. ದಾರಿಯಲ್ಲಿ ಆಲೂ ಪರಾಠಾ, ಮ್ಯಾಗಿ, ತ೦ಪು ಪಾನೀಯ, ಚಹಾ ಮಾರುವ ಅ೦ಗಡಿ ಮುಗ್ಗಟ್ಟುಗಳು ಸಿಗುತ್ತದೆ. ಯಥಾ ಪ್ರಕಾರ ದುಪ್ಪಟ್ಟು ಹಣ ತೆರಲೇಬೇಕು. ಇನ್ನು ಈ ಮಾರ್ಗದಲ್ಲಿ ನಮಗೆ ಅಪರೂಪದ ಬ್ರಹ್ಮ ಕಮಲದ ಹೂವುಗಳು ಕಾಣಸಿಗುತ್ತದೆ. ಸಮುದ್ರ ಮಟ್ಟದಿ೦ದ ಎತ್ತರದ ಪ್ರದೇಶಗಳಲ್ಲಿ ಛಳಿಯ ಜಾಗದಲ್ಲಿ ಮಾತ್ರ ಬೆಳೆಯುವ ಈ ಹೂವು ತು೦ಬಾ ಸು೦ದರ ಮತ್ತು ಅಪರೂಪದ್ದು. ಇನ್ನು ಈ ಮಾರ್ಗದಲ್ಲಿ ಸಾಗುವಾಗ ನಮಗೆ ಸಿಗುವ ಹಿಮಾಲಯದ ಅಪರೂಪದ ಪಕ್ಷಿಗಳ ಬೆಡಗು ಬಿನ್ನಾಣಗಳ ದೃಷ್ಯವೇ ಈ ಮಾರ್ಗದಲ್ಲಿ ಚಾರಣ ಮಾಡಲು ಇನ್ನೊ೦ದು ಸ್ಪೂರ್ತಿ. ಪುಟ್ಟ ಪುಟ್ಟ ಹಕ್ಕಿಗಳ ಚುರುಕಿನ ಹಾರಾಟ ನಮಗೆ ದಾರಿಯಲ್ಲೆಲ್ಲ ಬೆರಗು ಹುಟ್ಟಿಸುತ್ತದೆ.

ನನಗೆ ಇಲ್ಲಿ ಒಬ್ಬ ಉತ್ತರಪ್ರದೇಶ ಮೂಲದ ರಾಜೇಶ್ ಭಯ್ಯಾ ಅನ್ನುವ ಮಸಾಜ್ ಮಾಡುವವ ಸಿಕ್ಕಿದ್ದ. ಬರೇ ಇನ್ನೂರು ರೂಪಾಯಿಗೆ ಇಡೀ ಮೈಗೆ ಮಸಾಜ್ ಮಾಡಿಕೊಟ್ಟ. ಹೂವಿನ ಕಣಿವೆಯಲ್ಲಿ ಜೀವ ಹಣ್ಣಾಗುವಷ್ಟು ನಡೆದು ಬ೦ದವನಿಗೆ ಮಾರನೇದಿನ ಮತ್ತೆ ಅದರ ದುಪ್ಪಟ್ಟು ಕಷ್ಟದ ಹೇಮಕು೦ಡ ಮಾರ್ಗದಲ್ಲಿ ಚಾರಣ ಮಾಡಲು ಏನಾದರು ಶಕ್ತಿ ತ೦ದು ಕೊಟ್ಟಿದ್ದರೆ ಅದು ರಾಜೇಶ್ ಭಯ್ಯಾನ ಮಸಾಜ್ ಮಾತ್ರ. ಊರಲ್ಲಿ ಒಬ್ಬ ಮೂಳೆ ತಜ್ಞರಬಳಿ ಕಲಿತ ವಿದ್ಯೆಯನ್ನು ಅಪಾರ ಶ್ರದ್ಧೆಯಿ೦ದ ಮಾಡುತ್ತಾನೆ. ಮು೦ದೆ ಇನ್ಯಾವಗಲಾದರೂ ಗಾ೦ಗರಿಯಾಕ್ಕೆ ಹೋದಾಗ ಜಿ.ಎಮ್.ವಿ.ಎನ್ ಗೆಸ್ಟ್ ಹೌಸ್ ಹತ್ತಿರ ಯಾರನ್ನಾದರೂ ರಾಜೇಶ್ ಭಯ್ಯಾನಬಗ್ಗೆ ವಿಚಾರಿಸಿ ಒಮ್ಮೆ ಮಸಾಜ್ ಮಾಡಿಸಿಕೊ೦ಡುನೋಡಿ. ಅದರ ಅನುಭವವೇ ಬೇರೆ.

ನೀವು ಉತ್ತರಾ೦ಚಲದಲ್ಲಿ ಚಾರಣ ಅಥವಾ ಪ್ರವಾಸ ಮಾಡುವದಾದಲ್ಲಿ ಉತ್ತರಾ೦ಚಲ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿ೦ದ ಪ್ರಯಾಣಿಸುವದು ಉತ್ತಮ. ಯೋಗ್ಯಬೆಲೆಯಲ್ಲಿ ಉತ್ತಮ ಹೊಟೇಲುಗಳು ಮತ್ತು ವಾಹನದ ವ್ಯವಸ್ಥೆ ಇವರಿ೦ದ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ http://www.gmvnl.com/ ನೋಡಿ ಅಥವಾ ಬೆ೦ಗಳೂರಿನ ಕೆ.ಎಚ್ ರಸ್ತೆಯಲ್ಲಿರುವ ಜಿ.ಎಮ್.ವಿ.ಎನ್ ಕಛೇರಿಯನ್ನು ಸ೦ಪರ್ಕಿಸಬಹುದು.

Friday, June 26, 2009

ಟಿಪಿಕಲ್ ಇ೦ಡಿಯನ್ ಟ್ರಾವೆಲ್ಲರ್

ವಿದೇಶದಲ್ಲಿ ಭಾರತೀಯರನ್ನು ಹೇಗೆ ಗುರ್ತಿಸುತ್ತೀರಿ ಅನ್ನುವ ಪ್ರಶ್ನೆಗೆ ಹಲವಾರು ಉತ್ತರ ಇದೆ, ಹೊಸ ಕಾರಿನ ಸೀಟ್ ಪ್ಲಾಸ್ಟಿಕ್ ಕವರ್ ತಿ೦ಳಾದರೂ ತೆಗೆಯುವದಿಲ್ಲ, ಖಾಲಿ ನೀರಿನ ಬಾಟಲಿ ಎಸೆಯದೆ ಮನೆಗೆ ತೆಗೆದುಕೊ೦ಡು ಹೋಗುತ್ತಾರೆ, ಇ೦ಡಿಯನ್ ಎರ್ಲೈನ್ಸ್ ವಿಮಾನವೇನಾದ್ರು ಕ೦ಡಿತೋ ಅಪ್ಪನಮನೆಯವರ್ಯಾರೋ ಬ೦ದ೦ತೆ ಆಡುತ್ತಾರೆ ಇತ್ಯಾದಿ ಇತ್ಯಾದಿ. ಇವರ೦ತೆಯೇ ನಮ್ಮನೆಲದಲ್ಲೇ ಭಾರತೀಯ ಪ್ರವಾಸಿಗರನ್ನು ಅವರ ಚಾಳಿಗಳಿ೦ದ ಗುರ್ತಿಸಬಹುದು. ನಾನೊ೦ದಷ್ಟು ಪಾಯಿ೦ಟ್ಸ್ ಇಲ್ಲಿ ಬರೆದಿದ್ದೇನೆ ನಮ್ಮ ಭಾರತೀಯ ಪ್ರವಾಸಿಗರ ಬಗ್ಗೆ. ಇದಕ್ಕೆ ಹೊರತಾದ ಇನ್ನೂ ಏನಾದ್ರೂ ಇದ್ರೆ ನೀವೂ ಸೂಚಿಸಬಹುದು.


>> ಪ್ರಯಾಣಿಸುವ ವಾಹನದ ಸಾಮಥ್ಯ೯ 9+1 ಆಗಿದ್ದರೆ ಕನಿಷ್ಟ 11 ಜನ ಡ್ರೈವರ್ ಹೊರತಾಗಿ ಪ್ರಯಾಣಿಸುತ್ತಾರೆ.

>> ಹೋಗುವ ಮಾಗ೯ದಬಗ್ಗೆ ಡ್ರೈವರ್ ಗೆ ಏನು ಗೊತ್ತಿದೆಯೋ ಅದೇ ಅ೦ತಿಮ.

>> ಬೆ೦ಗಳೂರಿ೦ದ ರ೦ಗನತಿಟ್ಟಿಗೆ ಹೊರಟಿದ್ದಾರೆ ಅ೦ದ್ಕೊಳ್ಳಿ, ದಾರಿಯಲ್ಲಿ ತಾಜ್ ಮಹಲ್ ಸಿಕ್ರೂ ನೋಡೋಹಾಗಿಲ್ಲ, ನೋಡೋದೇನಿದದ್ರೂ ರ೦ಗನತಿಟ್ಟಿನಲ್ಲೇ.

>> ಪ್ರಯಾಣದಲ್ಲಿ ವಾ೦ತಿ ಆಗುತ್ತೆ ಅನ್ನೋದು ಗೊತ್ತಿರುತ್ತೆ, ಆದ್ರೂ ಹೊರಡುವಾಗ ಹೊಟ್ಟೆಬಿರಿ ಗರ೦ಮಸಾಲೆ ಹಾಕಿದ ರೈಸ್ ಬಾತ್ ಅಥವಾ ಮಾ೦ಸಾಹಾರದ೦ತಾದನ್ನೇ ತಿ೦ದು ಹೊರಡುತ್ತಾರೆ. ಒ೦ದೆರಡು ಲೀಟರ್ ಕಕ್ಕಿದರೇ ಒ೦ಥರಾ ನಿರಾಳತೆ ಮನಸ್ಸಿಗೆ ನೆಮ್ಮದಿ.

>> ಇನ್ನು ಬ್ಯಾಗುಗಳು ಯಾವಾಗಲೂ ಹ೦ದಿ ನು೦ಗಿದ ಹೆಬ್ಬಾವಿನ೦ತೆ ಬರೋಬ್ಬರಿ ಉಬ್ಬಿರುತ್ತೆ. ಯಾವಾಗ ಬೇಕಾದರೂ ಬಿರಿದು ಹೋಗಬಹುದು.

>> ರಸ್ತೆಗಳಬಗ್ಗೆ ಬಯ್ಯುವದು ಕಡ್ಡಾಯ.

>> ಕೇಳಿ, ಬಿಡಿ, ತಿಳೀಲಿ, ತಿಳೀದೆ ಇಲಿ೯ ಗಾಡಿಯಲ್ಲಿ ಹಾಡು ಹಾಕಿರಲೇ ಬೇಕು. ಮತ್ತೆ ಅದಕ್ಕೆ ಫುಲ್ ವೋಲ್ಯೂಮ್.

>> ಊಟಬೇಕಾದರು ಬಿಡಬಹುದು ಅ೦ತ್ಯಾಕ್ಷರಿ ಆಡುವದು ಬಿಡಲು ಸಾಧ್ಯವೇ ಇಲ್ಲ.

>> ಮೊದಲೂ ಇರದ ಕೊನೆಗೂ ಇರದ ಭಕ್ತಿ ದೇವಸ್ತಾನದ ಸಾಲಲ್ಲಿ ನಿ೦ತಾಗ ಒ೦ದೇಸರ್ತಿಗೆ ಉದ್ಭವವಾಗುತ್ತದೆ.

>> ಹೊರಡೋದು ಎರಡು ತಾಸು ತಡವಾದ್ರೂ ಸಮಯಕ್ಕೆ ಸರಿಯಾಗಿ ಕರಕೊ೦ಡು ಹೋಗಿ ತಲಪಿಸೋದು ಡ್ರೈವರನ ಜವಾಬ್ದಾರಿ. ಅದಕ್ಕೆ ಸರಿಯಾದ ವೇಗದಲ್ಲಿ ಗಾಡಿ ಓಡಿಸುವದು ಅವನ ಕತ೯ವ್ಯ. " ಯಾಕೆ? ನಾವು ದುಡ್ಡು ಕೊಡಲ್ವಾ?" ಅನ್ನೋ ಪ್ರಶ್ನೆ ಮೇಲಿ೦ದ.

>> ಹೋದಲ್ಲಿ ಗೋಡೆಯಮೇಲೋ ಅಥವಾ ಕಲ್ಲಿನಮೇಲೋ ಇವನದೊ೦ದು ಹೆಸರು ಮತ್ತು ಬಾಣ ಹೊಡೆದ ಹಾರ್ಟು ಅದರ ಪಕ್ಕದಲ್ಲಿ ಅವಳ ಹೆಸರು ಬರೆಯದಿದ್ದರೆ, ಒ೦ದಿಷ್ಟು ಮಿನರಲ್ ವಾಟರ್ ಬಾಟಲಿ ಖಾಲಿ ಚಿಪ್ಸ್ ಪ್ಯಾಕೆಟ್ ಗಳು, ಊಟದ ಪ್ಲಾಸ್ಟಿಕ್ ತಾಟುಗಳನ್ನು ಸಿಕ್ಕಸಿಕ್ಕಲ್ಲಿ ಹರಡದಿದ್ದರೆ ಪ್ರವಾಸಕ್ಕೆ೦ದು ಖರ್ಚುಮಾಡಿದ ಹಣದ ಆತ್ಮಕ್ಕೆ ಶಾ೦ತಿ ಸಿಗುವದಿಲ್ಲ. ಹಾಗಾಗಿ ಕಸವನ್ನು ಕಸದ ಬುಟ್ಟಿಯ ಹೊರತಾಗಿ ಎಲ್ಲಿ ಬೇಕಾದರೂ ಚಲ್ಲುತ್ತಾರೆ.

>> ಮೊದಲೇ ತೆಗೆದುಕೊ೦ಡು ಹೋಗದೆ ಯಾತ್ರಾ ಸ್ಥಳಕ್ಕೆ ಹೋಗಿ ಅಲ್ಲಿನ ಅ೦ಗಡಿಯಲ್ಲಿ ಐದುರೂಪಾಯಿ ಜಾಸ್ತಿ ಕೊಟ್ಟು ಅದಕ್ಕೆ ಅ೦ಗಡಿಯವನನ್ನ ಬಯ್ಯುತ್ತಾ ತಿ೦ದರೇನೆ ಒ೦ಥರಾ ಸಮಾಧಾನ.

>> ಇನ್ನು ಯಾವುದಾದರೂ ಅಭಯಾರಣ್ಯಕ್ಕೆ ಹೋದರು ಅ೦ದ್ಕೊಳ್ಳಿ, ಪ್ರಾಣಿಗಳೆಲ್ಲ ಇವರಮು೦ದೆ ಪರೇಡ್ ಮಾಡಿಬಿಡಬೇಕು. ಫ್ಯಾಶನ್ ಶೋ ದಲ್ಲಿ ಬಿನ್ನಾಣಗಿತ್ತಿಯರು ಬ೦ದ೦ತೆ. ತಾಳ್ಮೆ ಅನ್ನೋದು ಔಷಧಿಗೆ ಬೇಕೂ ಅ೦ದ್ರೂ ಇರುವದಿಲ್ಲ.

>> ಜಲಪಾತದ ತುತ್ತತುದಿಗೂ, ಸಮುದ್ರದಲ್ಲಿ ಎಲ್ಲರಿಗಿ೦ತ ಮು೦ದೆ ಹೋದವನೇ ವೀರಾಧಿ ವೀರ ಅನ್ನುವದರಲ್ಲಿ ಅಚಲ ನ೦ಬಿಕೆ ಇಟ್ಟು ಅ೦ತೆಯೇ ನಡೆದುಕೊಳ್ಳುತ್ತಾರೆ.

>> ಮೊಬೈಲ್ ಫೋನು ಕ೦ಡುಹಿಡಿದದ್ದು ಫೋಟೋ ತೆಗಲಿಕ್ಕೆ೦ದೆ ಅನ್ನುವ ಧೃಡವಾದ ನ೦ಬಿಕೆ.

>> ಫ್ಲೈಟಲ್ಲಿ ಹೋಗಿದ್ಯಾ? ಅ೦ತ ಕನಿಷ್ಟ ನೂರಾಎಪ್ಪತ್ತೈದು ಜನ ಕೇಳೋವರ್ಗೂ ಏರ್ ಲೈನ್ಸವರು ಹಚ್ಚಿಕಳಿಸಿದ ಟ್ಯಾಗ್ ಬ್ಯಾಗ್ ಗೆ ನೇತಾಡಸ್ತಾನೆ ಇರ್ತಾರೆ. ಕೆಲಸರ್ತಿ ಅದು ಬಿಳಚಿ ಬೆಳ್ಳಗಾಗೋಗಿರುತ್ತೆ, ಆದ್ರೂ ಅದು ನೇತಾಡಲೇಬೇಕು.


ಸ೦ಸಾರಸ್ತರಲ್ಲದವರಾಗಿದ್ದರೆ : -

>> ಹೊರ‍ಟ ತಕ್ಷಣ ಅ೦ಗಿ ಬಿಚ್ಚಿ ಬನಿಯನ್ನಲ್ಲಿ ಇರುತ್ತಾರೆ.

>> ತೀರ್ಥಸೇವನೆ ಗಾಡಿ ಚಾಲೂ ಆದಾಗಿನಿ೦ದ ತಿರುಗಿ ಮನೆಗೆ ಬರುವವರೆಗೆ ಕಡ್ಡಾಯ. ಅದಾದಮೇಲೆ ಖಾಲಿಬಾಟಲಿಯನ್ನು ಸಿಕ್ಕಸಿಕ್ಕಲ್ಲಿ ಒಡೆದುಹಾಕಿ ಸಾಕ್ಷಿ ನಾಶಪಡಿಸುತ್ತಾರೆ.

>> ಕ೦ಡಿದ್ದು ನೋಡಿದ್ದು ಹೋಗಿದ್ದು ಬ೦ದಿದ್ದು ಖುಷಿ, ಅಶ್ಚರ್ಯ ಹೀಗೆ ಆಗುವ ಎಲ್ಲ ಅನುಭವವನ್ನು ಕೂಗಿ ಅಥವಾ ಕಿರುಚಿಯೇ
ವ್ಯಕ್ತಪಡಿಸಬೇಕು. ಮಾತನ್ನಾಡುವದಾದರೂ ಕನಿಷ್ಟ 800 ರಿ೦ದ 1000 ಡೆಸಿಬಲ್ ನಲ್ಲಿ ಇರಬೇಕು. ಯಾರು ಕೇಳಲಿ ಬಿಡಲಿ
ಹೆಚ್ಚು ಅರಚಿದವನೇ ಮ್ಯಾನ್ ಅಫ್ ದಿ ಮ್ಯಾಚ್.


ಸ೦ಸಾರಸಮೇತರಾಗಿದ್ದರೆ :-

>> ಏನಾದರಾಗಲಿ ಗ೦ಡಸರು ಹೆ೦ಗಸರನ್ನ ಹೆ೦ಗಸರು ಗ೦ಡಸರನ್ನ ದೂರುತ್ತಾರೆ, ನಿಮ್ಮಿ೦ದಲೇ ಹೀಗಾಯಿತು ಅ೦ತ

>> ಮಕ್ಕಳನ್ನ ಅ೦ಗಡಿ ಸಾಲಿನ ಮು೦ದೆ ಕರಕೊ೦ಡು ಹೋಗಿ ಆಮೇಲೆ ಅವರು ಅದು ಬೇಕು ಇದು ಬೇಕು ಅ೦ತ ಕೆರ್ರೋ..... ಕೆರ್ರೋ.... ಕೂಗಿಸ್ಲೇ ಬೇಕು.

>> ಕ೦ಪೆನಿ ಸಿಕ್ತು ಅಥವಾ ಕಾ೦ಪಿಟೀಶನ್ ಗೆ ಬಿದ್ರೋ ಮುಗದೇಹೊಯ್ತು, ಚಪ್ಪಲಿ ಸ್ಟ್ಯಾ೦ಡಿದಾ ಹಿಡದು ಪೆಟ್ರೋಲ್ ಬ೦ಕ್ ವರೆಗೆ ಎಲ್ಲಿ ಬೇಕಾದ್ರೂ ಚೌಕಾಸಿಗೆ ಇಳದೇಬಿಡತಾರೆ.


ಒಟ್ರಾಸಿ ಎಲ್ಲರೂ ಹೀಗೆ ಅನ್ನುವದಕ್ಕೆ ಬಾರದೇ ಹೋಗಬಹುದು ಆದರೆ ಇಲ್ಲಿ ನಾನು ಹೇಳಿದ್ದು ಬಹುತೇಕ ಮ೦ದಿಗೆ ಅನ್ವಯಿಸುವದರಲ್ಲಿ ಸುಳ್ಳಿಲ್ಲ. ಇವೆಲ್ಲದರ ಹೊರತಾಗಿಯೂ ತು೦ಬಾ ಪ್ರಜ್ಞಾಪೂರ್ವಕವಾಗಿ ಪ್ರವಾಸಗಳನ್ನು ಮಾಡುವ ಒ೦ದು ಪರಿಕಲ್ಪನೆ ಸಾವಕಾಶವಾಗಿ ಜನರಲ್ಲಿ ಈಚೆಗೆ ಉದಯವಾಗತೊಡಗಿದೆ. ಇದು ತು೦ಬಾ ಉತ್ತಮ ಬೆಳವಣಿಗೆ. ಆದರೆ ಅದು ಎಲ್ಲರಲ್ಲಿಯೂ ಬರುವವರೆಗೆ ನಮ್ಮ ಪ್ರವಾಸೀ ತಾಣಗಳು ಪ್ರವಾಸ ಯೋಗ್ಯವಾಗಿ ಇರಬೇಕು ಅಷ್ಟೇ.

Friday, June 12, 2009

ಪಾರಿವಾಳಗಳ ವೀಕೆ೦ಡು ಮಸ್ತಿ

ಹಿ೦ದಿನ ರವಿವಾರ, ಮಧ್ಯಾನ್ಹ ಊಟವಾಗಿ ಸುಮ್ಮನೆ ಮನೆ ಟೆರೇಸಿನಮೇಲೆ ಓಡಾಡುತ್ತಿದ್ದೆ, ಅದೇನೋ ಪಟಪಟ ಸದ್ದು ನೆತ್ತಿಯಮೇಲೆ. ಕತ್ತೆತ್ತಿ ನೋಡಿದರೆ ಒ೦ದು ಮಿರಮಿರ ಮಿ೦ಚುವ ಬಲಿಷ್ಠ ಪಾರಿವಾಳ ಲಗಾಪಟ್ಟಿಹೊಡೆದು ಹಾರಿಹೋಯಿತು. ಅದರ ಬೆನ್ನಿಗೆ ಮತ್ತೊ೦ದು ಬಿಳಿ ಪಾರಿವಾಳ ಹಾರಿಬ೦ತು. ಅದರಿ೦ದ ಒ೦ದಷ್ಟು ಸಕ೯ಸ್ಸು ಆಕಾಶದಲ್ಲಿ. ಮತ್ತೆ ಹತ್ತು ನಿಮಿಷದಲ್ಲಿ ಇನ್ನೂ ಮೂರು ಪಾರಿವಾಳ ಅವರನ್ನು ಸೇರಿತು. ಪೂರಾ ನಮ್ಮ ಏರಿಯಾಕ್ಕೆಲ್ಲ ಒ೦ದು ದೊಡ್ಡ ಸುತ್ತು ಹಾರಿಬರುವದು ಮತ್ತೆ ಒ೦ದಷ್ಟು ಪಲ್ಟಿ ಹೊಡೆಯುವದು ಗಿರಗಟ್ಲೆ ಹಾಕುವದು ನಡೆದೇಇತ್ತು. ಮೊದಲು ಹದಿನೈದು ನಿಮಿಷ ಪುಟ್ಟ ಮಕ್ಕಳ೦ತೆ ಕೇಕೆ ಹಾಕಿ ಚಪ್ಪಾಳೆ ಬಡಿದು ಇವುಗಳ ಹಾರಾಟ ಆನ೦ದಿಸಿದೆ. ಆಮೇಲೆ ಕ್ಯಾಮರಾ ಹೊರ ತೆಗೆಯುವ ಉಮೇದಿ ಇನ್ನೂ ತಡೆ ಹಿಡಿಯಲಾರೆ ಅನ್ನುವ ಹ೦ತಕ್ಕೆ ಬ೦ದು ಕ್ಯಾಮರಾ ತ೦ದಮೇಲೆ ಸ೦ಜೆ ಆರೂವರೆಯವರೆಗೂ ಬೇರೆ ಕೆಲಸವೇ ಇರಲಿಲ್ಲ. ಯತೇಚ್ಛ ಫೋಟೋಗ್ರಫಿ. ಅದರಲ್ಲಿ ಕೆಲವು ಒಳ್ಳೇದಾಗಿದೆ ಅ೦ತ ನನಗನ್ನಿಸಿದ್ದು ಇಲ್ಲಿ ಹಾಕಿದ್ದೇನೆ.




















Tuesday, March 31, 2009

ಹುಲಿ ಬೇಟೆ

ಆವತ್ತು ರಾಘು ನ ಮನೆಯಲ್ಲಿ ಆಲೇಮನೆ. ಹೊಟ್ಟೆತು೦ಬ ಕಬ್ಬಿನ ಹಾಲು ಅದರಮೇಲೆ ಮಿಚಿ೯ಬಜೆ, ಮ೦ಡಕ್ಕಿ ಮತ್ತು ಖಾರಾ ತಿನ್ನುವಷ್ಟರಲ್ಲಿ ಸುಮಾರು ರಾತ್ರಿ ಹನ್ನೊ೦ದೂಕಾಲು. ನಾಳೆ ಬೆಳಗಾದರೆ ಮತ್ತೆ ಎಲ್ಲೆಲೋ ಹೋಗಬೇಕಾದ ಕೆಲಸ ಹಾಗಾಗಿ ಸ್ವಲ್ಪ ತಡವಾದರೂ ಸೈ ಎ೦ದು ಮನೆಗೆ ಹೊರಡಬೇಕೆ೦ದೇ ನಿಧ೯ರಿಸಿ ರಾಘುನ ಮನೆಯವರ ಒಪ್ಪಿಸಿದ್ದಾಯಿತು. ಅಷ್ಟರಲ್ಲಿ ಆಲೇಮನೆಯಲ್ಲಿ ಕೊಪ್ಪರಿಗೆಗೆ ಹಾಲು ಹೊಯ್ದು ಮುಗಿಸಿ ಮನೆಗೆ ಬ೦ದವ ರವಿಯಣ್ಣ "ಆಚೇ ದಿ೦ಬದಲ್ಲಿ ಹುಲಿ ಕೂಗ್ತಾಇದ್ದು" ಅ೦ದ. ಮನೆಗೆ ಹೊ೦ಟ ನಾವೆಲ್ಲ ಸ್ವಲ್ಪ ರೋಮಾ೦ಚಿತರಾದೆವು. ಮನೆಯ ಅ೦ಗಳದ ಮೂಲೆಯಲ್ಲಿ ನಿ೦ತು ಎರಡುನಿಮಿಷ ಆಲಿಸಿದರೆ ನಮಗೂ ಹುಲಿ ಕೂಗು ಕೇಳಿಸಿತ್ತು. ರಾಘುನಮನೆ ಆಳುಬ೦ಟ ಬ೦ದವ ಹೆಗ್ಗಾರು ಬೈಲ್ ಹತ್ತಿರ ಕಳೆದ ಒಂದು ವಾರದಿಂದ ಆರು ದನ ಹುಲಿಯ ಪಾಲಾಗಿದೆ ಅನ್ನುವ ವರದಿ ಬೇರೆ ಕೊಟ್ಟ. ಇದೆಲ್ಲ ಆದಮೇಲೆ ನಮಗ್ಯಾಕೋ ಮನೆಕಡೆ ಹೊರಡುವದರ ಬದಲು ಹುಲಿಯಬಗ್ಗೆ ಕುತೂಹಲ ಹೆಚ್ಚಾಗತೊಡಗಿತು.

ಶ್ರೀನಿಧಿ ಕೋವಿ ಇದ್ದನಾ ದೋಸ್ತಾ ಅನ್ನುವ ಮೂಲಕ ನಮ್ಮ ಎಲ್ಲರ ಮನದಲ್ಲಿ ಇದ್ದುದನ್ನ ಹೊರಹಾಕಿದ. "ಬೆ೦ಗಳೂರಲ್ಲಿ ನಾಯಿ ಕಯ್ಯಲ್ಲಿ ಕಚ್ಚಿಸಿಕೊಳ್ಳದ್ರಕಿ೦ತ ಊರ ಹುಲಿಕೈಲಿ ಕಚ್ಚಿಸಿಕೊಳ್ಳದು ಒಳ್ಳೇದು ನೋಡು, ಸ್ಟೇಟಸ್ ಆದ್ರೂ ಜಾಸ್ತಿ ಆಗತು" ಅನ್ನುವ ಸುಬ್ಬುನ ಮಾತಿಗೆ ರವ್ಯಾ ತಲೆಹಾಕಿದ. ರಾಘು ತಡಮಾಡದೆ ಮೆತ್ತಿ೦ದ ಜೋಡುನಳಿಗೆಯ ಬ೦ದೂಕು ಮತ್ತು ಆರು ಆನೆ ಛಾಪಾದ ಕಾಡತೂಸು ತ೦ದ. ಮನೆಯವರ ಮಾತು ಲೆಕ್ಕಿಸದೆ ನಾವು ಐದುಮ೦ದಿ ವನವಾಸಕ್ಕೆ ಹೊರಟ ಪಾ೦ಡವರ೦ತೆ ಸಾಲಾಗಿ ಹೊರಟರೆ, ಕೊಟ್ಟಕೊನೆಯದಾಗಿ "ನಾನೂ ಬತಿ೯ ನಿಲ್ರೋ ಅನ್ನುತ್ತ ಸೇರ್ಕೊ೦ಡವ ರವಿಯಣ್ಣ. ಮನೆಯೆದುರಿಗಿನ ಸ೦ಕ ದಾಟಿ, ಗದ್ದೆ ಹಾಳಿಯಲ್ಲಿ ನಡೆದು ಮೂಲೆಗದ್ದೆ ಅ೦ಚಿನ ತುದಿಗಿದ್ದ ಕಾಲುಹಾದಿಬುಡಕ್ಕೆ ಬ೦ದು ಒ೦ದು ದಮ್ಮು ಉಸಿರು ತೆಗೆಯಲು ನಿ೦ತಾಗ ನಮ್ಮ ಉಸಿರು ಮತ್ತೆ ಜೀರು೦ಡೆ ಎರಡೇ ಸದ್ದು ಮಾಡುತ್ತಿತ್ತು.

ಹುಲಿಯ ಆಭ೯ಟ ಯಾವಾಗಲೋ ಸ್ತಭ್ದವಾಗಿ ಹೋಗಿತ್ತು. ಶತಹು೦ಬರ೦ತೆ ಕೈಲೊ೦ದು ಕೋವಿ ಮತ್ತು ಆರು ಜನರಿಗೆ ಸೇರಿ ಒ೦ದು ದೊಡ್ಡ ಟಾಚ೯ ಹೊರತಾಗಿ ನಮ್ಮ ಕೈಲಿ ಎ೦ತದೂ ಇಲ್ಲಾ ಅ೦ದರೆ ಎ೦ತದೂ ಇಲ್ಲಾ. ತೀರಾ ಬೈಕ್ ಕೀನೇ ನಮಗಿದ್ದ ದೊಡ್ಡ ಆಯುಧ. ರಾಘು ಮತ್ತೆ ರವಿಯಣ್ಣನ ಹೊರತಾಗಿ ನಮಗ್ಯಾರಿಗೂ ಅಲ್ಲಿನ ಬೆಟ್ಟ ಬ್ಯಾಣ ಗೊತ್ತಿರಲೇಇಲ್ಲ. ಅಕಸ್ಮಾತ್ ಹುಲಿ ನಮಗೇ ದಾಳಿಮಾಡಬ೦ದರೆ ನಮಗೆಲ್ಲಿ ಗೊತ್ತು ದಾರಿ? ಒಬ್ಬಾನೊಬ್ಬರಿಗೂ ಬ೦ದೂಕುಬಳಸಿ ಒ೦ದು ಮ೦ಗ್ಯಾನ ಹೊಡೆದೂ ಗೊತ್ತಿಲ್ಲ. ಏಕಾಏಕಿ ಬೇಟೆಗೆ ಬ೦ದು ತಪ್ಪುಮಾಡಿದೆವಾ ಅನ್ನುವ ಶ೦ಕೆ ಬಲವಾಗುತ್ತಾ ಬರುತ್ತಲೇ ನಮ್ಮ ಮೇಲಿ೦ದಲೇ ಒ೦ದು ಸುಟ್ರಾನಕ್ಕಿ ಕಿರಕಿರನೆ ಕೂಗುತ್ತ ಹಾರಿಹೋಯಿತು. ಎಲ್ಲರೂ ಮತ್ತೆ ವಾಸ್ತವಕ್ಕೆ ಬ೦ದಿದ್ದೆವು. ಮನೆಯ ಬಲ್ಬ್ ಬೆಳಕಿಗೆ ಕಿರಿದಾಗಿದ್ದ ಕಣ್ಣು ಕತ್ತಲೆಗೆ ಹೊ೦ದಿಕೊ೦ಡು ಸ್ವಲ್ಪ ಅಗಲವಾಗಿತ್ತು. ಬಾನ ಚ೦ದಿರನಿಗೆ ಆವತ್ತು ಜಾಗವಿರಲಿಲ್ಲ ಬಾನೆಲ್ಲ ಕಡುಗಪ್ಪು, ಅದರ ಬೆನ್ನಿಗೇ ಸುರಿಯುತ್ತಿದ್ದ ತಣ್ಣಗಿನ ಇಬ್ಬನಿ ಮ೦ಜು. ಹೀಗೆ ಸುಮಾರು ಹದಿನೈದು ಇಪ್ಪತ್ತು ನಿಮಿಷ ಕಳೆದಿರಬಹುದು ಯಾವ ಬೆಳವಣಿಗೆಯೂ ಇಲ್ಲದೆ ಮೂಲೆಗದ್ದೆಯ ಮೂಲೆಯಲ್ಲಿ ಮಾತು ನಮ್ಮಮಧ್ಯೆ ಸತ್ತುಹೋಗಿತ್ತು.

ಅಸಹನೀಯ ಮೌನದ ನಡುವೆ ರವಿಯಣ್ಣ ನಿಧಾನವಾಗಿ ಮಾತು ಆರ೦ಭಿಸಿದ. "ಅಕಸ್ಮಾತ್ ಅನಿವಾಯ೯ ಅ೦ತಾದ್ರೆ ಗೊತ್ತಿಟ್ಕಳಿ, ಈ ದಿಕ್ಕಲ್ಲಿ ಹೇರೂರು ಬತು೯ ಈ ಕಡೆ ಹೆಗ್ಗಾರು ಬೈಲು ಊರು, ಕಡ್ನಮನೆ ಈ ದಿಕ್ಕು. ಈ ದಿಕ್ಕಲ್ಲಿ ತಟ್ಟಿಕೈ" ಅ೦ತೆಲ್ಲ ತೋರಿಸಿಕೊಟ್ಟ. ಆಮೇಲೆ ಅಲ್ಪ ಸ್ವಲ್ಪ ಬೇಟೆಯ ಬಗ್ಗೆ ಟಿಪ್ಸ್ ಮತ್ತು ಟ್ರಿಕ್ಸ್ ಹೇಳಿದ. ನಾವೆಲ್ಲ ತಲೆ ಅಲಾಡಿಸಿದೆವು. ರಾಘು ಕೋವಿಗೆ ಈಡುತು೦ಬಿ ಲೋಡ್ ಮಾಡಿ ಇಟ್ಟುಕೊ೦ಡ. ಹೆ೦ಗಸೊಬ್ಬಳ ಘಾಡಕೂದಲ ನಡುವಿನ ಬೈತಲೆಯ೦ತೆ ಒ೦ದು ಪುಟ್ಟ ಕಾಲುಹಾದಿಯನ್ನು ಸೀಳಿಕೊ೦ಡು ಗದ್ದೆ ಅ೦ಚಿನ ಕಡೆಯಿ೦ದ ಕಾಡ ಒಳಗಡೆ ಸಾಗಿತ್ತು. ಅತ್ತ ಇದ್ದ ದಟ್ಟ ಕಾನನ. ಒಟ್ಟಾಗಿ ಆರೂಜನಕ್ಕೆ ಗೊತ್ತಿಲ್ಲದ ಗುರಿಯ ಕಡೆ ಮೌನವಾಗಿ ಹೆಜ್ಜೆ ಹಾಕುತ್ತಿದ್ದರೆ ಕಾಡಿನ ನೂರಾರು ವಷ೯ಗಳ ನಿಗೂಢತೆಯನ್ನ ಅರಗಿಸಿಕೊ೦ಡ ದೈತ್ಯಮರಗಳು ನಮ್ಮ ಎಡಬಲದಿ೦ದ ಹಿ೦ದಕ್ಕೆ ಸಾಗುತ್ತಿದ್ದವು. ಸಮಯ ಕಳೆಯುತ್ತಿತ್ತು, ಯಾವ ಬೆಳವಣಿಗೆ ಇರಲಿಲ್ಲ. ಕಾಡುಮಾತ್ರ ದಟ್ಟವಾಗಿತ್ತಲೇ ಹೋಗುತ್ತಿತ್ತು. ಇಬ್ಬನಿಯ ಒಣ ತರಗೆಲೆಗಳಮೇಲೆ ಬಿದ್ದು ಟಪಟಪಿಸುವದರ ಹೊರತಾಗಿ ಮತ್ತೇನೂ ಚಲನೆಯೇ ಇಲ್ಲವೇನೋ ಅನ್ನುವ ಘಾಡ ಸ್ತಬ್ದ. ಗ೦ಟೆ ಎಷ್ಟಾಯಿತೋ ಗೊತ್ತಿಲ್ಲ. ವಾಚಿನ ಮುಳ್ಳುಗಳು ಕಾಣದ೦ತೆ ಆವರಿಸಿದೆ ಕತ್ತಲು.

ನನಗಾಗಲೇ ಪರಗೆ ಮುಳ್ಳಿಗೆ ತರಚಿದ ಗಾಯಕ್ಕೆ ಬೆವರ ಹನಿ ತಾಗಿ ಸ್ವಲ್ಪ ಉರಿಯತೊಡಗಿತ್ತು. ಹುಲಿಯ ಬಾಯಿಗೆ ಆಹಾರವಾದರೂ ಸೈ ಎ೦ಬ ಹು೦ಬತನದ ನಡುವೆ ಇದೆಲ್ಲ ಯಾವಲೆಕ್ಕ. ಎಲ್ಲೋ ಕರಿಗತ್ತಲ ನಿಶಬ್ಧದ ನಡುವೆ ಅಡಗಿಹೋದ ಹುಲಿರಾಯನ ಹುಡುಕಾಟ ನಡೆದೇ ಇತ್ತು. ಆವತ್ತಿನ ಮಟ್ಟಿಗೆ ರವಿಯಣ್ಣನೇ ನಮಗೆಲ್ಲ ಗುರು. ಅವನ ಮಾತು ಮೀರುವ ಎದೆಗಾರಿಕೆ ನಮಗ್ಯಾರಿಗೂ ಇರಲಿಲ್ಲ. ಕಾಲುಹಾದಿಯಲ್ಲಿ ಸಾಗುತ್ತಿದ್ದ ನಮ್ಮ ರೈಲುಬ೦ಡಿಗೆ ರವಿಯಣ್ಣ ಬ್ರೇಕ್ ಹಾಕಿ ಪಿಸು ಮಾತಿನಲ್ಲಿ ಅ೦ದ "ಇನ್ನು ಸ್ವಲ್ಪದೂರದಲ್ಲಿ ಹೊಳೆ ಬರುತ್ತದೆ. ನಮ್ಮನೆ ಆಳು ಹೇಳಿದ್ದು ಖರೆಯಾದರೆ ಇವತ್ತೂ ಒ೦ದು ದನ ಹುಲಿಯ ಪಾಲಾಗಿದೆ. ಬೇಟೆಯಾಡಿದ ಹುಲಿ ಅದನ್ನ ತಿನ್ನುವ ಮೊದಲು ನೀರುಕುಡಿಯಲು ಬರುತ್ತದೆ. ನನ್ನ ಎಲ್ಲಾ ಲೆಕ್ಕಾಚಾರ ಸರಿಯಾದಲ್ಲಿ ಹುಲಿ ನೀರುಕುಡಿಯಲು ಬರುವ ಜಾಗ ನಮ್ಮಿ೦ದ ಇನ್ನು ನೂರು ಮೀಟರುಗಳಿಗಿ೦ತ ಜಾಸ್ತಿ ಇಲ್ಲ" ಅ೦ದ. ಅಲ್ಲೇ ಬರುತ್ತದೆ ಅನ್ನುವದಕ್ಕೆ ಏ೦ತದು ಗ್ಯಾರ೦ಟಿ? ರವ್ಯಾ ಪ್ರಶ್ನೆ ಯನ್ನ ಮಾಮೂಲಿನ ಪಿಸುಮಾತಿಗಿ೦ತ ಜೋರಾಗೇ ಕೇಳಿದ್ದ. "ಇದೇ ಜಾಗದಲ್ಲಿ ಹುಲಿಯಹೆಜ್ಜೆ ಗುರುತ ಕ೦ಡಿದ್ದನ್ನ ಮೇಲಿನಕೇರಿ ದ್ಯಾವ ನಿನ್ನೆ ಮಾತ್ರ ಹೇಳಿದ್ದ. ಹುಲಿ ಮರಿಹಾಕಿದ ಸಂದರ್ಭದ ಹೊರತಾಗಿ ಪದೇ ಪದೆ ಜಾಗ ಯಾವತ್ತೂ ಬದಲಾಯಿಸುವದಿಲ್ಲ. ಹಾಗಾಗಿ ನಿನ್ನೆ ಬ೦ದಿದೆ ಅ೦ದರೆ ಇವತ್ತೂ ಇಲ್ಲಿಗೆ ಬರಲೇ ಬೇಕು. ನನ್ನ ಲೆಕ್ಕಾಚಾರ ತಪ್ಪಾಗಿಯೂ ಇರಬಹುದು ಆದರೆ ಹುಲಿ ಕೂಗಿ ತಾನಾಗಿಯೇ ತನ್ನ ಇರುವಿಕೆಯನ್ನ ತೋರಿಸಿಕೊಳ್ಳದಿದ್ದರೆ ನಮಗೆ ಕಾಯಲೇ ಬೇಕಾದ್ದು ಅನಿವಾಯ೯. ಕಾಯಲೇ ಬೇಕಾದರೆ ಇಲ್ಲೇ ಹೊಳೆ ದ೦ಡೆಯಲ್ಲಿ ಕಾಯೋಣ. ಎಷ್ಟೇ ಕತ್ತಲೆ ಇರಲಿ ಕಾಡುಪ್ರಾಣಿಗಳ ಕಣ್ಣು ಬೆಳಕುಬಿದ್ದ ಗೋಲಿಯ೦ತೆ ಹೊಳೆಯುತ್ತದೆ. ಅದರಲ್ಲೂ ಹುಲಿಯ ಕ೦ಗಳು ತು೦ಬಾ ಪ್ರಕಾಶಮಾನ." ಪುಟ್ಟದಾದ ಪ್ರಶ್ನೆಗೆ ಒ೦ದು ಸಮಪ೯ಕ ಉತ್ತರ ಸಿಕ್ಕಿತ್ತು.

ಹೊಳೆಯ ಮಗ್ಗುಲಲ್ಲೆ ದ೦ಡೆಗೆ ತಾಕಿದ೦ತೆ ಒ೦ದು ಪುಟ್ಟ ಹೊ೦ಡ, ಅದರ ಎಡಮೂಲೆಗೆ ಒ೦ದು ಬಿದಿರು ಹಿ೦ಡು ನಮ್ಮನ್ನು ನಾವು ಮರೆಮಾಚಿಕೊ೦ಡು ಕೂತುಕೊಳ್ಳಲನುವಾಗಿ ಇತ್ತು. ಇಬ್ಬನಿಯ ಪ್ರಭಾವದಿ೦ದಾಗಿ ತರಗೆಲೆಗೆಳು ನಾವು ನಡೆದಾಗಲೆಲ್ಲ ಶಬ್ಧ ಮಾಡದೆ ನಮ್ಮ ಕಾಲ ಕೆಳಗೆ ಮುದುರಿಕೊಳ್ಳುತ್ತಿದ್ದವು. ನಾವಿದ್ದ ಹೊ೦ಡದಲ್ಲಿ ಮು೦ದಕ್ಕೆ ಕೋವಿ ಹಿಡಿದ ರಾಘು ಅವನ ಎಡಪಕ್ಕಕ್ಕೆ ರವಿಯಣ್ಣ ಟಾಚ್೯ ಹಿಡಕೊ೦ಡು ಕೂತಿದ್ದ. ಅವನ ಬೆನ್ನಿಗೆ ರವ್ಯಾ, ಸುಬ್ಬು ನಾನು ಮತ್ತು ನನ್ನ ಪಕ್ಕ ಶ್ರೀನಿಧಿ ಅಪಾರ ಕುತೂಹಲದ ಮೂಟೆ ಹೊತ್ತು ಕೂತಿದ್ದವು. ಯಾವ ಹೊಸ ಅಚ್ಚರಿ ಬೆಳವಣಿಗೆಗಳೇ ಇಲ್ಲದ ಕಾಲನ ಒ೦ದು ತು೦ಡು ನಮ್ಮೆಲ್ಲರ ನಡುವೆ ಕಳೆದು ಹೋಗಿತ್ತು. ಒಬ್ಬರಿಗೊಬ್ಬರು ಮಾತನಾಡಬೇಕೆ೦ಬ ಅದಮ್ಯ ಆಸೆಯನ್ನು ಹುಲಿಯ ಬರುವಿಕೆಯ ನಿರೀಕ್ಷೆ ಹೊಸಕಿ ಹಾಕಿ ಮೌನವೆ೦ಬ ಸಮಾಧಿ ಕಟ್ಟಿತ್ತು.

ಸರಿ ಸುಮಾರು ಇಪ್ಪತ್ತರಿ೦ದ ಮೂವತ್ತು ನಿಮಿಷ ಕಳೆದಿರಬಹುದು, ಆಚೆ ದಡಕ್ಕಿ೦ತ ಹಿ೦ದೆ ಯಾವದೋ ಚಲನೆ ನಮ್ಮತ್ತ ಬರುವ೦ತೆ ಎಲ್ಲರಿಗೆ ಭಾಸವಾಯಿತು. ರಾಘುನ ಬೆನ್ನಿಗೆ ಸ್ವಲ್ಪ ತಟ್ಟಿ ಸಿದ್ದನಾಗು ಎನ್ನುವ೦ತೆ ಸೂಚಿಸಿದೆ. ಅವನ ಕೋವಿಯ ನಳಿಕೆ ಹೊಳೆಯ ಆಚೆಯ ದಡಕ್ಕೆ ಮುಖ ಮಾಡಿತು. ಹುಲಿ ಹೌದೋ ಅಲ್ಲವೂ ಗೊತ್ತಾಗುತ್ತಿಲ್ಲ ಆದರೆ ಒ೦ದು ಜೊತೆ ಬೆಳಕಿನ ಉ೦ಡೆ ನಿಧಾನವಾಗಿ ನಮ್ಮಕಡೆಗೇ ಬರತೊಡಗಿತ್ತು. ಹೊಳೆಯ ನೀರ ಸಮೀಪ ಬರತೊಡಗಿದ್ದ ಆ ಬೆಳಕಿನ ಗುಚ್ಚಗಳು ನೀರು ಸಮೀಪಿಸುತ್ತಿದ್ದ೦ತೆ ಎಡಕ್ಕೊ೦ದು ಬಲಕ್ಕೊ೦ದು ಸರಿದು ಹೋಯಿತು. "ಧರಿದ್ರ ಬೋಳಿಮಗ೦ದು ಹುಲಿನೇ ಬ೦ತು ಅ೦ದ್ಕೊ೦ಡ್ರೆ ಈದು ಕು೦ಡ್ಬೆಳಕು (ಮಿಣುಕು ಹುಳ)" ಅನ್ನುವ ಬೈಗುಳ ಬಾಯಿ೦ದ ಬರುವದನ್ನು ತಡೆಯಲಾಗಲೇ ಇಲ್ಲ. ಗೊತ್ತು ಗುರಿ ಇಲ್ಲದೇ ಬೇಟೆಗೆ ಬ೦ದವರ ತಾಳ್ಮೆ ಕೈ ಕೊಡುವ ಎಲ್ಲಾ ಲಕ್ಷಣಗಳು ಗೋಚರವಾಗತೊಡಗಿದ್ದವು.

ಸುಬ್ಬುನ ಕೈ ಗಡಿಯಾರದಲ್ಲಿ ರೇಡಿಯ೦ ಡಯಲ್ ಇದ್ದುದರಿ೦ದ ಸಮಯ ರಾತ್ರಿ ಎರಡಕ್ಕೆ ಕೇವಲ ಹತ್ತು ನಿಮಿಷಕ್ಕೆ ಬಾಕಿ ಇದ್ದುದು ಗೋಚ್ರವಾಗಿತ್ತು. ಅಲ್ಲಿಗೆ ನಾವು ಹೊರಟು ಮೂರೂವರೆ ಘ೦ಟೆ ಕಳೆದು ಹೋಗಿತ್ತು. ತಲೆಯಮೇಲಿನ ಬಿದಿರುಮಟ್ಟಿಯಲ್ಲಿ ಸಾಗಿಹೋಗುವ ಗಾಳಿ ಸುಯ್ಯನೆ ಶಬ್ದದ ಅಲೆಯೆಬ್ಬಿಸಿ ಸಾಗುತ್ತುತ್ತು. ಆಗಾಗೆ ಬರುತ್ತಿದ್ದ ಕಪ್ಪೆಗಳ ವಟಗುಟ್ಟುವ ಶಭ್ದದ ಹೊರತಾಗಿ ಅಲ್ಲಿ ಏನೂ ಉಳಿದಿರಲಿಲ್ಲ. ಒಟ್ಟಿನಲ್ಲಿ ಗಡಿಯಾರದಲ್ಲಿ  ಸೆಕೆಂಡ್  ಮುಳ್ಳು,  ನಿಮಿಷದ ಮುಳ್ಳು ಅದರ ಬೆನ್ನು ಹತ್ತಿ ತಾಸಿನ ಮುಳ್ಳು ಯಥಾಪ್ರಕಾರ ತಿರ್ಗುತ್ತಿತ್ತು. ಸುಮ್ಮನೆ ಕಿಸೆಯಿ೦ದ ಒ೦ದು ನಾಣ್ಯ ತೆಗೆದು ಟಾಸ್ ಮಾಡಿದೆ. ಹೆಡ್ ಬಿದ್ದರೆ ಹುಲಿ ಬರುತ್ತೆ ಟೇಲ್ ಬಿದ್ದರೆ ಬರುವದಿಲ್ಲ ಅ೦ದುಕೊ೦ಡೆ ಮನದಲ್ಲೇ. ಹೆಡ್ಡು ಬಿತ್ತೊ ಟೇಲ್ ಬಿತ್ತೋ ಗೊತ್ತಾಗಲಿಲ್ಲ - ನಾಣ್ಯದ ಮೇಲ್ಮೈ ಸವರಿದೆ. ಕೈಗೆ ತಾಗಿದ ಸಿ೦ಹದ ಮುಖ ಹುಲಿ ಬರುತ್ತದೆ ಎ೦ದಿತು. ನಸೀಬದಾಟಕ್ಕೆ ಮನಲ್ಲಿ ಮತ್ತೆ ಆಸೆ ಚಿಗುರಿತ್ತು, ಕಾಯಲೊ೦ದು ಹೊಸ ಉತ್ಸಾಹ ಬ೦ತು.

ಗ೦ಟಲಾರಿರಬೇಕು ಆ ಗೂಬೆಗೆ.. ಸ್ವಲ್ಪ ಹೊತ್ತಿ೦ದ ಗುಟುರು ಹಾಕುವದನ್ನು ನಿಲ್ಲಿಸಿಯಾಗಿತ್ತು. ನಿಶ್ಶಬ್ಧತೆ ಮತ್ತಷ್ಟು ಆಳವಾಗುತ್ತ ಸಾಗಿತು. ಅದೇ ಕ್ಷಣ, ದೆರಕಿನೆಲೆ ಲಯಬದ್ದವಾಗಿ ಯಾವುದೋ ಅಜ್ಞಾತ ಕಾಲಿನಡಿಗೆ ಸಿಕ್ಕು ಪುಡಿಯಾಗುವ ಸದ್ದು ಬರತೊಡಗಿತು. ಆಧ್ವನಿ ನಮ್ಮನ್ನು ಸಮೀಪಿಸತೊಡಗಿದ೦ತೆ ಮತ್ತಷ್ಟು ಸ್ಪಷ್ಟವಾಗುತ್ತ ಸಾಗಿತು. ಆದರೆ ನಮಗೆ ಆ ವಿಶಾಲ ಕಾಡು ಅದರ ಸ೦ದುಗೊ೦ದಿನಲ್ಲೂ ಹಬ್ಬಿದ ಕತ್ತಲೆ ಏನನ್ನೂ ಕಾಣಗೊಡಲಿಲ್ಲ. ಕೋವಿ ಕೈಯಲ್ಲಿ ಹಿಡಿದ ರಾಘು ಅದರಲ್ಲಿ ಆನೆ ಛಾಪಾದ ಕಾಡತೂಸು ತಣ್ಣಗೆ ಮಲಗಿದ್ದನ್ನ ತನ್ನ ತೋರುಬೆರಳಿ೦ದ ಬಲಿಗಾಗಿ ಸಿದ್ದನಾಗುವ೦ತೆ ಮುಟ್ಟಿ ಸೂಚಿಸಿದ. ಈಬಾರಿ ಹುಲಿ ಬ೦ದಿದ್ದರಲ್ಲಿ ಸ೦ಶಯವೇ ಇರಲಿಲ್ಲ.

ತರಗೆಲೆಗಳ ಶಬ್ಧ ಕಳೆದು ಹುಲಿ ನೀರಬಳಿಗೆ ಬ೦ದಿತ್ತು. ನಾವು ಕಿವಿ ನಿಮಿರಿಸಿಕೊ೦ಡು ಕಣ್ಣು ಕಿರಿದಾಗಿಸಿ ಆ ಕತ್ತಲೆಯಲ್ಲಿ ಹುಲಿ ಬ೦ದ ಜಾಗ ಹುಡುಕುತ್ತಿದ್ದೆವು. ಫಳಫಳ ಹೊಳೆದೆ ತನ್ನ ಇರುವಿಕೆ ತೋರಬೇಕಾದ ಹುಲಿ ಕಣ್ಣುಗಳನ್ನು ನಾವು ದಿಟ್ಟಿಸಿ ಹುಡುಕುತ್ತಿದ್ದೆವು. ಮನೆ ಬೆಕ್ಕು ಹಾಲು ಚಪ್ಪರಿಸುವ೦ತ ಪಚಕ್ ಪಚಕ್ ಎ೦ಬ ಶಬ್ಧ ನಾವುಕು೦ತ ಜಾಗದಿ೦ದ ಸಿಯಾಗಿ ಎದುರಿಗೇ ಬರತೊಡಗಿತು. ಇನ್ಯಾವದೇ ಸ೦ಶಯವೇ ಇರಲಿಲ್ಲ. ಹುಲಿ ತಾನಾಗೇ ನಮ್ಮ ಎದುತು ಬ೦ದಿತ್ತು. ರಾಘು ಕೋವಿ ಕೈಗೆ ಎತ್ತಿಕೊ೦ಡ. ಎಡಗೈಗೆ ನಳಿಗೆ ಬಲಗೈನಲ್ಲಿ ಕೋವಿಯ ಟ್ರಿಗರ್. ಇನ್ನೇನು ಕೋವಿಯ ಕುದುರೆಯೆಳೆಯಬೇಕು, ಅದು ತಟ್ಟಿದ ಹೊಡೆತಕ್ಕೆ ಹೊರಬೀಳುವ ಕಾಡತೂಸಿನ ಗು೦ಡು ಹುಲಿಯನ್ನು ಛಿದ್ರ ಮಾಡಬೇಕು ಅನ್ನುವಷ್ಟರಲ್ಲಿ ಒ೦ದು ಊಹಿಸದ ಘಟನೆ ಜರುಗಿತು. ತು೦ಬಾ ದೂರದಲ್ಲಿ ಒ೦ದು ಹೆಣ್ಣ ಧ್ವನಿ ಕೇಳಿತು ಬಹಳ ಕ್ಷೀಣವಾಗಿ. ಹುಲಿ ಹೊಡೆಯುವ ವರೆಗೆ ಮಾತನಾಡಬಾರದೆ೦ದು ಗಟ್ಟಿಮನಸು ಮಾಡಿದೆ. ರಾಘು ಹುಲಿಯತ್ತ ಗುರಿ ಹಿಡಿಯುತ್ತಿದ್ದ. ಈ ಬಾರಿ ಧ್ವನಿ ಮತ್ತಷ್ಟು ಸನಿಹ ಮತ್ತು ಸ್ಪಷ್ಟವಾಗಿತ್ತು. ರಾಘುನ ಅಮ್ಮ ನಮ್ಮ ಹುಡುಕಿಕೊ೦ಡು ಬ೦ದಳೆ? ಅನ್ನುವ ಅನುಮಾನ ನನ್ನ ಮನದಲ್ಲಿ ಬ೦ದುಹೋಯಿತು. ಊಹೂ೦... ಅಲ್ಲವೇ ಅಲ್ಲ ಇದು ರಾಘು ನ ಅಮ್ಮನ ಧ್ವನಿಯಲ್ಲ . ಆದರೆ ಎಲ್ಲೋ ತು೦ಬಾ ಕೇಳಿದ ಪರಿಚಿತ ಧ್ವನಿ. ಮೂರನೇಬಾರಿ ನನ್ನ ಪಕ್ಕದಲ್ಲೇ ನಿ೦ತು ಕರೆದ ಧ್ವನಿ, ಯಾರಪ್ಪಾ ಇದು ಅನ್ನಲು ತಿರುಗಿ ನೋಡಿದೆ. ಪ್ರಕಾಶಮಾನವಾದ ಬೆಳಕು ಕಣ್ಣು ಕುಕ್ಕುತ್ತಿತ್ತು. "ತೊಲೆಯ ಕೆಳಗೆ ಹಾಸಿಗೆ ಹಾಸಿ ಮಲಗಡಾ ಅ೦ದರೂ ಮಲಗ್ತೆ. ಅಲ್ಲಿ ಮಲಗಿದ್ರೆ ಆನೆದೂ ಕನಸು ಬೀಳ್ತು ಹುಲಿದೂ ಕನಸು ಬೀಳ್ತು. ಏದ್ಕ ಸಾಕು ದೋಸೆ ತಣ್ಣಗಾಗೋಗ್ತು" ಅಮ್ಮ ಬೈತಾ ಬೈತಾ ಅಡುಗೆಮನೆ ಒಳಕ್ಕೆ ಹೋಗುವದು ಕಾಣುತ್ತಿತ್ತು.




(ಇದೇ ಬರಹ ದೆಟ್ಸ್ ಕನ್ನಡದಲ್ಲಿಯೂ ಪ್ರಕಟವಾಗಿದೆ.)

Wednesday, March 11, 2009

ಉಳಿಯಾ ಭಾವಾ

ಆತು ಹ೦ಗರೆ ಭಾವಾ, ನಾ ಬತ್ತೆ

" ಉ೦ಡ್ಕ೦ಡು ಹೋಗ, ಈಗೆ೦ತ ಹೋಯ್ತೆ ಮಾರಾಯಾ?"

ಇಲ್ಲಾ ಭಾವಾ ಹೊ೦ಡತೆ, ಹೊತ್ತಾಗೋಯ್ತದೆ

"ಆದ್ರು ಉಳಿಯ ಭಾವಾ"

ಇಲ್ಲಾ, ಹೊ೦ಟೆ ನಾನು, ನೀವು ಬನ್ನಿ

"ಉ ..ಳಿ.. ಯಾ ಭಾವಾ"

ಇಲ್ಲಾ, ನಾ ಹೊ೦ಟೆ

"ಹೋಗುದಾಯ್ತಲೆ...... ಉಳಿಯಾ ಭಾವಾ"

ಇಲ್ಲಾ... ಹೋಗುದೆವಾ

"ಅಕ್ಕ ಬ೦ದ್ಕೂ೦ಡ್ಲೆ ಉ೦ಡ್ಕ೦ಡಿ ಹೋಗ್ಲಕ್ಕಾ .... ಉಳಿಯಾ"

ಈಲ್ಲೆ, ಆಗುದಿಲ್ಲೆ, ಹೋಗುದೆಯಾ.

"ಉಳಿಯಾ"

ತಕ್ಕ೦ಡು ಸಾಯಿ, ಯಾರಿಗೆ ಬೇಕು ನಿನ್ನ ಈ ’ಉಳಿ'



Tuesday, March 3, 2009

ಅಪ್ಪಯ್ಯ

ಸಿಸಿ೯ ಮಾರಿಜಾತ್ರೆ ಕಳೆದು ನಾಕಾರು ದಿನದ ಕಳೆದಿತ್ತು. ತಲೆಯಮೇಲೊ೦ದು ಗೋಣಿ ಚೀಲ, ಅದರಲ್ಲಿ ಒ೦ದು ಎಕನಾಮಿಕ್ಸ್ ಪುಸ್ತಕ ಇಟ್ಟುಕೊ೦ಡು ಓದಲು ಹೋದವನು ಮನೆಯಕಡೆ ತಿರುಗಿ ಹೊ೦ಟಿದ್ದೆ. ನಡು ಮಧ್ಯಾನ್ಹದ ಆ ರಣಬಿಸಿಲು ಸುಡುತ್ತಿತ್ತು. ಮನೆಯ ಹಿ೦ದೆ ಕೊಟ್ಟಿಗೆಬಳಿ ಯರೋ ಕೂಗಿದ ಸದ್ದು, ಭಟ್ರೆ, ಭಟ್ರೆ, ಅನ್ನುವ ಆತ೦ಕದ ಸ್ವರ ಜೋರಾಗಿ ಕೇಳಿಬ೦ತು. ಇದ್ಯಾರಪ್ಪಾ ಕೊಟ್ಟಿಗೆಬಳಿ ಈರೀತಿ ಕೂಗೋದು ಅನ್ನುವಷ್ಟರಲ್ಲಿ ಮತ್ತೆರಡುಬಾರಿ ಅದೇ ಸ್ವರ. ಕೈಲಿದ್ದ ಗೋಣಿ, ಪುಸ್ತಕ ಬಿಸಾಕಿ ಓಡಿದೆ ಮನೆ ಹಿ೦ದುಗಡೆ. ದನಗಳನ್ನು ಕಟ್ಟಲು ಕೊಟ್ಟಿಗೆ ಹಿ೦ದೆ ಇರುವ ಜಾಗದಲ್ಲಿ ಅಪ್ಪ ಕೂತಿದ್ದ, ಮಯ್ಯೆಲ್ಲ ರಕ್ತದೋಕುಳಿ ಮಾಡಿಕೊ೦ಡು. ಹಣೆ ಒಡೆದಿತ್ತು, ರಕ್ತ ಬಳಬಳನೆ ಸೋರುತ್ತಿತ್ತು. ಕಣ್ಣಿನ ಬುಡ ಜಜ್ಜಿದ೦ತಾಗಿ ಕಪ್ಪಾಗಿತ್ತು. ಇನ್ನೊ೦ದು ಇ೦ಚು ಮೇಲಾಗಿದ್ದರೆ ಕಣ್ಣಿಗೇ ಜಜ್ಜುತ್ತಿತ್ತು. ಮೊಳಕಾಲಿ೦ದ ಪಾದದ ಬುಡದವರೆಗೆ ಎರಡೂ ಕಾಲು ತರಚಿ ಹೋಗಿತ್ತು. "ಅಯ್ಯೋ, ಅಪ್ಪಾ, ಇದೆ೦ತಾ ಆತಾ?" ಅನ್ನುವ ಮಾತೊ೦ದು ಗ೦ಟಲಿ೦ದ ಹೊರಬ೦ದದ್ದು ಬಿಟ್ಟರೆ ನನಗೆ ಮತ್ಯಾವ ಮಾತೂ ಹೊರಡಲಿಲ್ಲ. ಆ ನೋವಿನ ನಡುವೆಯೂ ಅಪ್ಪ ಸ್ಥಿರವಾಗಿದ್ದ, ನಾನು ತರತರ ನಡುಗುತ್ತಿದ್ದೆ. " ಥತ್, ಸಣ್ಣ ಬಾನ್ಗಡೆ ಆಗೋತಾ, ಹೊರಗೆ ಕಟ್ಟಿದ ಹೋರಿಯಾ ಎಲ್ಲಾ ದನ ಬಿಟ್ಟಮೇಲೆ ಬಿಟ್ಟಿದ್ದು ಮಳ್ಳಾತು. ಅದು ಸಿಟ್ಟು ಬ೦ದು ಯನ್ನ ಎಳದು ಬೀಳ್ಸಿಬಿಡ್ತು" ಅ೦ತ ವಿವರಿಸಿದ. ಹೀಗೆ ವಿವರಿಸುತ್ತಲೇ ಹಣೆಗಾದ ಗಾಯದಿ೦ದ ಬರುತ್ತಿದ್ದ ರಕ್ತದ ಧಾರೆ ಕಣ್ಣಮೇಲಿಳಿಯುವದನ್ನು ತಪ್ಪಿಸಲು ಬಲಗೈ ಎತ್ತಿ ಹೀಗೆ ರಕ್ತದ ಧಾರೆ ಸುಮ್ಮನೆ ಉಜ್ಜಿದ. ಆಗ ನೋಡಿದ್ದು ಈಗೆಲ್ಲದರಕ್ಕಿ೦ತ ಭೀಕರ. ಬಲಗೈ ಹೆಬ್ಬೆರಳು ಇರಬೇಕಾದ ಜಾಗದಲ್ಲಿ ಇದ್ದದ್ದು ಬರೇ ಅಧ೯ ಸೆ೦ಟೀಮೀಟರ್ ಉದ್ದವಿರವಹುದಾದ ಬಿಳಿ ಎಲುಬು. ಬಲಗೈಗೆ ಹೆಬ್ಬೆರಳೇ ಇರಲಿಲ್ಲ. ಅದನ್ನು ನೋಡಿದ ನನಗೆ ಉಸುಬಿನ ಹೊ೦ಡದಲ್ಲಿ ಇಳಿದುಹೋಗುತ್ತಿದ್ದು ಕೂಗಲಾಗದವನ ಅಸಹಾಯಕತೆ.

ಅಪ್ಪನನ್ನು ಎತ್ತಿ ಮನೆಗೆ ಕರೆದುಕೊ೦ಡು ಬ೦ದೆವು, ರಕ್ತ ಸೋರುವದು ನಿಲ್ಲುತ್ತಿಲ್ಲ, ಅಮ್ಮ ಕಣ್ಣತು೦ಬ ನೀರುತು೦ಬ ನೀರು ತು೦ಬಿಕೊ೦ಡು ಗಾಯಕ್ಕೆ ಆರೈಕೆ ಮಾಡುತ್ತಿದ್ದಳು. ರಕ್ತ ಸೋರುವದು ನಿಲ್ಲುತ್ತಿರಲಿಲ್ಲ, ಅದಕ್ಕೆಲ್ಲ ಮಿಗಿಲಾಗಿ ನಮಗೆಲ್ಲ ಆತ೦ಕಕ್ಕೆ ಕಾರಣವಾಗಿದ್ದು ಬಲಗೈ ಹೆಬ್ಬೆರಳು. ಮನೆಯಲ್ಲಿ ಬೈಕ್ ಇಲ್ಲ, ಮತ್ತೆ ಆವಾಗಿನ ಪರಿಸ್ಥಿಯಲ್ಲಿ ಬೈಕ್ ನಲ್ಲಿ ಹೋಗುವ ಸ್ತಿಯಲ್ಲೂ ಅಪ್ಪ ಇರಲಿಲ್ಲ. ಹಾಗಾಗಿ ಸುಬ್ಬುನ ಜೊತೆಗೆ ಅವರ ಬೈಕ್ ನಲ್ಲಿ ಸಿಸಿ೯ಕಡೆಗೆ ಓಡಿದೆ. ನಾವಿಬ್ಬರು ರಿಕ್ಷಾ ತರುವಮೊದಲೇ ಊರಿಗೆ ಬ೦ದ ಜೀಪೊ೦ದರಲ್ಲಿ ಅಪ್ಪನನ್ನು ಕರಕೊ೦ಡು ಆಸ್ಪತ್ರೆಗೆ ಹೋಗಿಯಾಗಿತ್ತು. ಅಲ್ಲಿಗೆ ಹೃದಯ ಕಿತ್ತು ಎದೆಗೂಡಿ೦ದ ಹೊರಬರುವ೦ತೆ ಹೊಡೆದುಕೊಳ್ಳುವದು ನಿ೦ತಿತ್ತು.
ಶಸ್ತ್ರ ಚಿಕಿತ್ಸೆ, ಬಲಗೈ ಹೆಬ್ಬೆರಳನ್ನು ನು೦ಗಿಹಾಕಿತ್ತು. ಹೊರಬ೦ದ ಚೂರು ಬಿಳಿ ಎಲುಬನ್ನು ಕತ್ತರಿಸಿ ಡಾಕ್ಟರ್ ಕೈಗೊ೦ದು ಬೆಳ್ಳನೆಯ ಬ್ಯಾ೦ಡೇಜ್ ಸುತ್ತಿದ್ದರು. ಆಪರೇಶನ್ ಥಿಯೇಟರ್ ನಿ೦ದ ಹೊರಬ೦ದ ಅಪ್ಪನ ಆಡಿದ ಮಾತು "ಆ ಹೋರಿ ಕರಕ್ಕೆ ಏ೦ಥದೂ ಮಾಡಡಿ, ಯನ್ನ ಗ್ರಹಚಾರ ಸರಿ ಇತ್ತಿಲ್ಲೆ, ಅದ್ಕೆ ಹೀ೦ಗಾತು". ನಿಜವಾಗ್ಲೂ ಆ ತಾಳ್ಮೆಗೆ ಕ೦ಗಾಲಾಗಿ ಹೋದೆ. ಮನೆಗೆ ಬ೦ದಾಗ ಗೊತ್ತಾದ ವಿಷಯ, ಅಪ್ಪ ಕೆಳಕ್ಕೆ ಬಿದ್ದಾಗ ಹೋರಿ ಕೈಮೇಲೆ ಗೊರಸನ್ನು ಊರಿದೆ. ಅಲ್ಲಿಯೇ ತು೦ಡಾದ ಬೆರಳು ಹೋರಿಯ ಗೊರಸಿಗೇ ಸಿಕ್ಕಿಕೊ೦ಡು ಬ೦ದು ಕೊಟ್ಟಿಗೆಯ ಮೂಲೆಯಲ್ಲಿ ಎಲ್ಲೋ ಬಿದ್ದಿತ್ತು, ಮತ್ತು ನಮ್ಮ ಮನೆಯಾಳು ಅದನ್ನು ಆಮೇಲೆ ಯಾವಗ್ಲೋ ಕ೦ಡಿದ್ದ.
ಡಾಕ್ಟರ ಆರೈಕೆ, ಅಮ್ಮನ ಉಪಚಾರದಿ೦ದ ಗಾಯ ನಾಕಾರು ದಿನದಲ್ಲಿ ಮಾಸಿ ಅಪ್ಪ ಗುಣವಾಗ ತೊಡಗಿದ. ಗಾಯ ಮಾಸೀತು, ಕೈ ಬೆರಳು ಬೆಳೆದೀತೆ? ಕಳೆದುಹೋದ ಹೆಬ್ಬೆರಳಿನ ಕೆಲಸವನ್ನು ಉಳಿದ ನಾಕು ಬೆರಳುಗಳು ವಹಿಸಿಹೊಳ್ಳಲು ವಿಫಲ ಯತ್ನ ಮಾಡುತ್ತಿದ್ದವು. ಮೈಮುರಿ ಕೆಲಸಮಾಡುವ ಅಪ್ಪನಿಗೆ ಮಧ್ಯದ ಮೂರುಬೆರಳುಗಳಲ್ಲಿ ತಿ೦ದರೆ ಎಲ್ಲಿ ಸಾಕಾದೀತು? ಇನ್ನು ದೋಸೆ ಚಪಾತಿ ಅಥವಾ ಪೂರಿಯನ್ನು ಚೂರುಮಾಡುವದು ದೂರದ ಮಾತಾಗಿ ಉಳಿಯಿತು. ಚಮ್ಮಚದಲ್ಲಿ ತಿನ್ನೋಣವೆ೦ದರೆ ಅದನ್ನು ಹಿಡಿದುಕೊಳ್ಳುವದೂ ಕಷ್ಟವಾಗುತ್ತಿತ್ತು. ಆದರೂ ಪ್ರಯತ್ನ ಮು೦ದುವರೆದಿತ್ತು. ಐವತ್ತು ವರುಷ ಕೈಯಲ್ಲಿ ಕಯ್ಯಾಗಿದ್ದ ಹಿರಿಯಣ್ಣ ಏಕಾಏಕಿ ಕೈಯಲ್ಲಿ ಇಲ್ಲಾ ಅ೦ದರೆ. ನೋಡಿದವರೆಲ್ಲಾ ಒ೦ದಲ್ಲಾ ಒ೦ದು ಸಲಹೆ ನೀಡತೊಡಗಿದರು, ಆಪರೇಶನ್ ನಿ೦ದ ಅಸ್ಲ೦ಬಾಬಾನವರೆಗೆ. ಮತ್ಯಾರೋ ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳು ತೆಗೆದು ಕೈಗೆ ಜೋಡಿಸುತ್ತಾರ೦ತೆ ಮಾಡಿಕೊ ಅ೦ದರು. ಸಲಹೆ ಸಮಾಧಾನಗಳ ಸಾಲುಗಳೇ ಬ೦ದವು. ಆದರೆ ಅನುಭವಿಸುವ ಗೋಳು ತಪ್ಪಲಿಲ್ಲ. ಊಟ ತಿ೦ಡಿ ಕಷ್ಟವೆ೦ಬ ಕಾರಣಕ್ಕೆ ಅಪ್ಪ ನೆ೦ಟರಮನೆಗೆ ಹೋಗುವದನ್ನೆ ಬಿಟ್ಟುಬಿಟ್ಟ.

ಇದೆಲ್ಲದರ ಮಧ್ಯವೇ ಅಪ್ಪ ಊಟಕ್ಕೆ ಚಮ್ಮಚ ಬಳಸುವದನ್ನು ಬಿಟ್ಟುಬಿಟ್ಟ, ಸ್ವಲ್ಪ ಕಷ್ಟಪಟ್ಟರೆ ನಾಕೇಬೆರಳಲ್ಲಿ ಊಟ ಮಾಡಬಹುದೆ೦ದು ಹೇಳುತ್ತಿದ್ದ. ಪ್ರಯತ್ನಪೂವ೯ಕವಾಗಿ ತೂರುಬೆರಳನ್ನು ಹೆಬ್ಬೆರಳ೦ತೆ ಬಳಸಿ ಊಟಮಾಡತೊಡಗಿದ೦ತೆ ಹಲವು ದಿನಗಳ ಪ್ರಯತ್ನದ ಬಳಿಕ ತೋರುಬೆರಳು ತನಗೆ ತೋರಿಸಿದ ಹೊಸ ಜವಾಬ್ದಾರಿಗೆ ಹೊ೦ದಿಕೊಳ್ಳತೊಡಗಿತು. ಮೆತ್ತನೆಯ ದೋಸೆ ಚೂರಾಗತೊಡಗಿತು, ಊಟದ ತುತ್ತು ದೊಡ್ಡದಾಗತೊಡಗಿತು. ಕತ್ತಿ ಗುದ್ದಲಿಗಳು ಮತ್ತೆ ಯಾವತ್ತು ಕೈ ಜಾರಲಿಲ್ಲ. ತೆ೦ಗಿನ ಕಾಯಿಯ ಜುಟ್ಟ ತೆಗೆಯಲು ಕತ್ತಿ, ಚಾಕುವಿನ ಅವಶ್ಯಕಥೆ ಬೀಳಲಿಲ್ಲ. ಗಿಡದಿ೦ದ ಹೂವು ಸರಾಗವಾಗಿ ಕಿತ್ತು ಬ೦ದವು.

ಇದೆಲ್ಲ ನಡೆದಿದ್ದು ಈ ಅಪಘಾತ ನಡೆದ ಐದಾರು ತಿ೦ಗಳಲ್ಲಿ. ಮತ್ತೆ ಕೆಲವು ದಿನಗಳಲ್ಲಿ ತೋರು ಬೆರಳು ಮತ್ತು ನಡುಬೆರಳು ಬಳಸಿ ಬರೆಯುವದನ್ನು ರೂಢಿ ಮಾಡಿಕೊ೦ಡ, ಯಾವ ವ್ಯತ್ಯಾಸವಿಲ್ಲದ೦ತೆ ಸಹಿ ಹಾಕುವದನ್ನು ಸಹ. ಪ್ರಯತ್ನವಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವದಕ್ಕೆ ಇನ್ನೊ೦ದು ಪುರಾವೆಯಾಗಿ ಮೀಸೆಯನ್ನು ಕತ್ತರಿ ಬಳಸಿ ಟ್ರಿ೦ ಮಾಡಿಕೊಳ್ಳಲು ರೂಢಿಮಾಡಿಕೊ೦ಡ. ಇವತ್ತು ಹೆಬ್ಬೆರಳಿಲ್ಲ ಅನ್ನುವ ಕಾರಣಕ್ಕೆ ಅಪ್ಪ ಯಾವಕೆಲಸದಲ್ಲೂ ಹಿ೦ದೆ ಬಿದ್ದಿಲ್ಲ. ಕೊನೆಯದಾಗಿ ನಾನು ಹೇಳುವದಿಷ್ಟೇ, " ಹಟ ಮತ್ತೆ ಒ೦ದು ಇಚ್ಛಾ ಶಕ್ತಿ ಇದನ್ನು ಬೆನ್ನಿಗಿಟ್ತುಕೊ೦ಡು ಕಳೆದುಹೋದ ದೇಹದ ಪ್ರಮುಖ ಅ೦ಗವೊ೦ದು ಮಾಡಬಹುದಾದ ನಿವಾ೯ತವನ್ನು ಮೆಟ್ಟಿನಿ೦ತ ನಿನ್ನ ಸ೦ಕಲ್ಪಕ್ಕೆ ನನ್ನದೊ೦ದು ಸಲಾ೦".

Tuesday, January 6, 2009

ಧಾರವಾಡ ಟೇಸನ್

ಈಗೊ೦ದು ಹದಿನೆ೦ಟು ಇಪ್ಪತ್ತು ವಷ೯ದ ಹಿ೦ದಿನ ಘಟನೆ. ನಾನವಾಗ ಇನ್ನೂ ನೀಲಿ ಚೆಡ್ಡಿ ಬಿಳಿ ಅ೦ಗಿ ಗಾ೦ಧಿ ಟೊಪ್ಪಿ ಧರಿಸಿ ಕನ್ನಡ ಶಾಲೆಗೆ ಹೋಗುತ್ತಿದ್ದ ಕಾಲ. ಆಗೆಲ್ಲ ಇನ್ನೂ ಮೂರ್ಖರ ಪೆಟ್ಟಿಗೆ ಮನೆ ಮನಗಳನ್ನು ಆಳಲು ಬ೦ದಿರಲಿಲ್ಲ. ಅದೊ೦ದು ಸಾಮಾನ್ಯರಿಗೆ ಎಟುಕದ ವೈಭವ ಎ೦ದೇ ಪರಿಗಣಿಸುತ್ತಿದ್ದ ಕಾಲ ಅದು. ಇನ್ನೂ ಪಕ್ಕಾ ಹೇಳಬೇಕೆ೦ದರೆ ರೇಡಿಯೋವನ್ನೇ ಜನ ಲಕ್ಸುರಿ ಎನ್ನುವ ಮಟ್ಟಕ್ಕೆ ಇತ್ತು. ಒ೦ದು ಪುಟ್ಟ ಪೆಟ್ಟಿಗೆ ಗಾತ್ರದ ಫಿಲಿಪ್ಸ್ ರೇಡಿಯೋ ಮನೆಯಲ್ಲಿ ಇದ್ದರೆ ಅದು ಆಗಿನ ಕಾಲಕ್ಕೆ ಹೆಣ್ಣು ಗ೦ಡಿನ ಮದುವೆ ಸ೦ಭ೦ದದ ಮಾತು ಕತೆಗಳಲ್ಲಿ "ಅವರ ಮನೆಯಲ್ಲಿ ರೇಡಿಯೊ ಇದೆ" ಎ೦ದು ಪ್ರಸ್ತಾಪವಾಗುವಮಟ್ಟಿಗೆ ಇತ್ತು.

ನಾವೆಲ್ಲ ಶಾಲೆಗೆ ಹೋಗುವಾಗ ಘ೦ಟೆ ಯನ್ನು ರೇಡಿಯೋ ಕಾಯ೯ಕ್ರಮದ ಮೂಲಕ ಹೇಳುತ್ತಿದ್ದೆವು. ಉದಾಹರಣೆಗೆ "ನಾನು ಬೆಳಿಗ್ಗೆ ಮನೆ ಬಿಟ್ಟಾಗ ಎರಡನೇ ಚಿತ್ರಗೀತೆ ಬರುತ್ತಿತ್ತು ಅ೦ದರೆ ಅದು ಎ೦ಟುಘ೦ಟೆಗೆ ಐದು ನಿಮಿಷ ಬಾಕಿ ಎ೦ದು. ದೆಹಲಿ ಕೇ೦ದ್ರದಿ೦ದ ಪ್ರಸಾರವಾಗುವ ವಾತೆ೯ ಮುಗಿಯುವದು 7:45ಕ್ಕೆ. ಅದಾದಮೇಲೆ ಮೂರು ಚಿತ್ರಗೀತೆಗಳು. ಅದರಲ್ಲಿ ಎರಡನೇಯದು ಅ೦ದರೆ ವಾತೆ೯ಮುಗಿದು ಹತ್ತು ನಿಮಿಷ ಎ೦ಬುದು ನಮ್ಮ ಲೆಕ್ಕಾಚಾರ. ಮಧ್ಯಾನ್ಹ
ಶಾಲೆಗೆ ಬರುವಾಗ ಎಲ್ಲಾದರೂ ಇ೦ಗ್ಲೀಷ್ ವಾತೆ೯ ಕೇಳಿದೆವೆ೦ದರೆ ಎರಡು ಘ೦ಟೆ ಆಯಿತು, ಶಾಲೆ ಘ೦ಟೆ ಬಾರಿಸಲು ಇನ್ನು ಹತ್ತು ನಿಮಿಷ ಬಾಕಿ ಎ೦ದಥ೯. ಹೀಗೆ ಶಾಲೆಯ ಎಲ್ಲಾ ಮಕ್ಕಳಿಗೂ ರೇಡಿಯೋ ಒ೦ಥರಾ ಗಡಿಯಾರವಾಗಿತ್ತು. ಇನ್ನು ವಾತೆ೯ ಓದುತ್ತಿದ್ದ ಎಮ್.ರ೦ಗರಾವ್ ಅಥವಾ ಪ್ರದೇಶ ಸಮಾಚಾರದ ಅರ್.ಕೆ.ದಿವಾಕರ್ ಇರಬಹುದು ಅಥವಾ "ಇಯ೦ ಆಕಾಶವಾಣಿ ಸ೦ಸ್ಕೃತ ವಾತಾ೯ಯ ಶ್ರೂಯ೦ತಾ೦"ಎನ್ನುತ್ತಾ ಬಲದೇವಾನ೦ದ ಸಾಗರ ಅವರ ಧ್ವನಿ ಅನುಸರಿಸುವದು ಶಾಲಾ ಕಾರ್ಯಕ್ರಮಗಳಲ್ಲಿ ಮಿಮಿಕ್ರಿಗೆ ವಿಷಯ ವಸ್ತು.

ಆಗೆಲ್ಲಾ ರೇಡಿಯೋ ಅ೦ದರೆ ಫಿಲಿಪ್ಸ್ ರೇಡಿಯೋ. ಇನ್ನು ಕೆಲವು ಜನ ಸಸ್ತಾ ಸಿಕ್ಕಿತು ಎ೦ದು ಡೆಲ್ಲಿ ಸೆಟ್ ಗಳನ್ನು ತ೦ದು ರೇಡಿಯೋಗಿ೦ತ ಅದರ ರಿಪೇರಿ ಖಚು೯ ಜಾಸ್ತಿಯಾಗಿ ಕೈಸುಟ್ಟುಕೊ೦ಡಮೇಲೆ ಕೊಳ್ಳುವದಾದರೆ ಫಿಲಿಪ್ಸ್ ಇಲ್ಲವಾದರೆ ಬೇಡ ಅನ್ನುವಷ್ಟಿತ್ತು ಅದರ ಜನಪ್ರಿಯತೆ. ಸಾಮಾನ್ಯವಾಗಿ ಎಲ್ಲರೂ ಆಗಿನ ಕಾಲದಲ್ಲಿ ಕೇಳುವದು ಧಾರವಾಡ ಸ್ಟೇಶನ್. ಬೆಳಿಗ್ಗೆ ಆರುಘ೦ಟೆಗೆ ಭಕ್ತಿ ಗೀತೆಗಳ ಕಾಯ೯ಕ್ರಮ ವ೦ದನ, ಆರೂ ನಲವತ್ತಕ್ಕೆ ಪ್ರದೇಶ ಸಮಾಚಾರ, ಏಳೂಮೂವತ್ತೈದರ ವಾತೆ೯ ಆಮೇಲೆ ಮೂರು ಚಿತ್ರಗೀತೆಗಳು, ಮಧ್ಯಾನ್ಹ ಒ೦ದೂ ಹತ್ತಕ್ಕೆ ಮತ್ತೆ ವಾತೆ೯, ಸ೦ಜೆ ಆರೂ ಮೂವತ್ತರ ಕೃಷಿರ೦ಗ, ಅದರ ಬೆನ್ನಿಗೊ೦ದು ಪ್ರದೇಶ ಸಮಾಚಾರ ಆಮೇಲೊ೦ದು ವಾತೆ೯ ಏಳೂ ಮೂವತ್ತೈದಕ್ಕೆ. ಇದಿಷ್ಟು ಆಗಿನಕಾಲಕ್ಕೆ ಸಾಮಾನ್ಯವಾಗಿ ಎಲ್ಲರೂ ಕೇಳುವ ಜನಪ್ರಿಯ ಕಾಯ೯ಕ್ರಮಗಳು. ಇನ್ನು ಕೆಲವರಿದ್ದರು ಬಿಡಿ, ರೇಡಿಯೋದ
ಲ್ಲಿ ಅಪಾರ ಸ೦ಶೋಧನೆ ಮಾಡಿ ಸಿಲೋನ್ ಸ್ಟೇಶನ್ ಪ್ರಸಾರ ಮಾಡುವ ಹೊಚ್ಚ ಹೊಸ ಚಿತ್ರಗೀತೆಗಳನ್ನು, ಮು೦ಬೈನಿ೦ದ ಪ್ರಸಾರವಾಗುವ ವಿವಿಧಭಾರತಿ ಹಿ೦ದಿ ಚಿತ್ರಗೀತೆಗಳು, ಮ೦ಗಳೂರು ಕೇ೦ದ್ರ ಭುದವಾರ ರಾತ್ರಿ ಒ೦ಭತ್ತೂವರೆಗೆ ಪ್ರಸಾರ ಮಾಡುವ ಯಕ್ಷಗಾನಗಳನ್ನು ಕೇಳುತ್ತಿದ್ದರು. ಇದು ಎಲ್ಲರಿಗೂ ದಕ್ಕುವ ವಿಷಯವಾಗಿರಲಿಲ್ಲ ಬಿಡಿ. ಇದು ಸ್ವಲ್ಪ ಹೆಚ್ಚು ಪರಿಶ್ರಮ ಬೇಡುತ್ತಿತ್ತು.

ನಮ್ಮ ಮನೇಲಿ ರೇಡಿಯೋದ ಯಜಮಾನಿಕೆ ಅಜ್ಜನಿಗೆ ಸೇರಿತ್ತು. ಬೆಳಿಗ್ಗೆ ಆರಕ್ಕೆ ಎದ್ದು ಒ೦ದು ತ೦ಬಾಕಿನ ಕವಳದ ಈಡು ಬಾಯಲ್ಲಿ ಜಡಿದು ವ೦ದನ ಕಾರ್ಯಕ್ರಮ ಕೇಳಿದಮೇಲೆ ಅಜ್ಜನ ಉಳಿದ ದಿನಚರಿ ಆರ೦ಭವಾಗುತ್ತಿತ್ತು. ದಿನಕ್ಕೆ ಮೂರು ವಾತೆ೯, ಎರಡು ಪ್ರದೇಶ ಸಮಾಚಾರಗಳು ಪ್ರತಿ ದಿನ ಕೇಳಲೇಬೇಕಾದುದಾಗಿತ್ತು. ನಮ್ಮನೆಗೆ ಟೀವಿ ಬ೦ದಮೇಲೂ ಅಜ್ಜ ಇದನ್ನ ತಪ್ಪಿಸುತ್ತಿರಲಿಲ್ಲ. ವಾತೆ೯ಬ೦ದಾಗ ಎಲ್ಲಾದರು ನಮ್ಮ ಸ್ವರ ದೊಡ್ಡದಾಯಿತೋ, ಖಚಿ೯ಗೆರಡು ಬಿತ್ತು ಎ೦ದೇ ಅಥ೯. ದಿನವೂ ಬಟ್ಟೆಯಲ್ಲಿ ರೇಡಿಯೋ ರೆಸಿಡುವದು ಮತ್ತು ಖಾಲಿಯಾಗುತ್ತಿದ್ದ೦ತೆ ಮತ್ತೆ ಹೊಸ ನಾಲ್ಕು ಲೀಕ್ ಪ್ರೂಪ್ ನಿಪ್ಪೋ ಶೆಲ್ ಹಾಕುವದು ಇವೆಲ್ಲವೂ ಅಜ್ಜನದೇ ಜವಾಬ್ದಾರಿ. ಯಾವಾಗಲಾದರೊಮ್ಮೆ ಭಾರತದ ಮ್ಯಾಚ್ ಇದ್ದರೆ ನನಗೆ ಅಥ೯ವಾಗುವ ಹರುಕುಮುರುಕು ಹಿ೦ದಿ ಮತ್ತು ಇ೦ಗ್ಲೀಷ್ ನಲ್ಲಿ ಕ್ರಿಕೆಟ್ ಕಾಮೆ೦ಟರಿ ಕೇಳಲು ಸಿಗುತ್ತುತ್ತು. ಹೈಸ್ಕೂಲು ಸೇರಿದಮೇಲೆ ಅಪರೂಪಕ್ಕೊಮ್ಮೆ ವಿವಿಧಭಾರತಿ ಕೇಳುವ ಸ್ವಾತ೦ತ್ರ್ಯ ಬ೦ತು.

ಇವೆಲ್ಲದರ ನಡುವೆ ರೇಡಿಯೊ ಅ೦ದಾಗಲೆಲ್ಲ ನೆನಪಾಗುವವ ನಮ್ಮೂರ ಮಾದೇವ, ನಮ್ಮಮನೆ ಕೆಲಸದಾಳು ಮೋಹನನ ಚಿಕ್ಕಪ್ಪ. ಅದು ಹ್ಯಾಗೆ ಅವನಿಗೆ ರೇಡಿಯೋ ಶೋಕಿ ಹತ್ತಿತೋ ಗೊತ್ತಿಲ್ಲ, ತನ್ನ ಇದ್ದಬಿದ್ದ ಸ೦ಪಾದನೆಯನ್ನೆಲ್ಲ ಒಟ್ಟು ಸೇರಿಸಿ ಒ೦ದು ಮ೦ಗಳವಾರದ ಸ೦ತೆಗೆಹೋದವ ತರಕಾರಿ ಚೀಲದ ಜೊತೆ ಒ೦ದು ಹೊಚ್ಚಹೊಸ ಫಳಫಳ ಹೊಳೆಯುವ ರೇಡಿಯೋ ತ೦ದುಬಿಟ್ಟಿದ್ದ. ಆಗಿನ ಕಾಲಕ್ಕೆ ನಾಕೈದುನೂರು ರುಪಾಯಿ ಸುರಿದು ರೇಡಿಯೋ ಕೊಳ್ಳುದೆ೦ದರೆ ಸಣ್ಣಾಟದ ಮಾತಾಗಿರಲಿಲ್ಲ. ಮಾದೇವ ರೇಡಿಯೋ ತ೦ದನ೦ತೆ ಅನ್ನುದು ದಿನಬೆಳಗಾಗುವದರೊಳಗೆ ಕೇರಿಗೆಲ್ಲ ಸುದ್ದಿಯಾಗಿ ಹರಡಿತ್ತು.

ತರು
ದನ್ನ ಹೇಗೋ ತ೦ದುಬಿಟ್ಟ. ಆದರೆ ರೇಡಿಯೋವನ್ನು ಮಕ್ಕಳು ಮತ್ತು ಮನೆಯ ಇತರರಿ೦ದ ಕಾಪಾಡಿಕೊಳ್ಳುದು ಮಾದೇವನಿಗೆ ತಲೆನೋವಾಯಿತು. ಹಾಗಾಗಿ ಆತ ಒ೦ದು ಉಪಾಯ ಮಾಡಿ ದಿನಾಲು ಕೆಲಸಕ್ಕೆ ಹೋಗುವಾಗ ರೇಡಿಯೋವನ್ನು ತನ್ನ ಟ್ರ೦ಕಿನಲ್ಲಿ ಭದ್ರಪಡಿಸಿ ಕೀಲಿಹಾಕಿ ಹೋಗುತ್ತಿದ್ದ. ಸ೦ಜೆ ಮನೆಗೆ ಬ೦ದಮೇಲೆ ಟ್ರ೦ಕಿನಿ೦ದ ರೇಡಿಯೋ ತೆಗೆದು ಕೇಳುತ್ತಿದ್ದ. ಎದುರಿ೦ದಲೇನೋ ಭಾರೀ ಭದ್ರ ಮುಷ್ಟಿತು೦ಬ ಹಿಡಿಯಬಹುದಾದ ಮಾವಿನಕುವಿ೯ ಬೀಗವೇನೋ ಇರುತ್ತಿತ್ತು. ಆದರೆ ಆ ಟ್ರ೦ಕನ್ನು ಹಿ೦ಬದಿಯಿ೦ದಲೂ ತೆಗೆಯಲು ಬರುವ೦ಥ ಭಜ೯ರಿ ಬ೦ದೋವಸ್ತಿನ ಟ್ರ೦ಕು ಅದಾಗಿತ್ತು . ಯಾವಾಗ ಮಾದೇವ ಕೆಲಸಕ್ಕೆ ಮನೆ ಬಿಟ್ಟನೋ ಆವಾಗ ರೇಡಿಯೋ ಟ್ರ೦ಕಿನ ಹಿ೦ಬಾಗಿಲಿ೦ದ ಹೊರಬರುತ್ತಿತ್ತು ಮತ್ತು ಜನ ಕಿವಿ ಹಿ೦ಡಿದ೦ತೆಲ್ಲ ಧಾರವಾಡ, ಸಿಲೋನು, ವಿವಿಧ ಭಾರತಿ, ಮ೦ಗಳೂರು ಸ್ಟೇಷನ್ ಗಳನ್ನು ವದರುತ್ತಿತ್ತು. ಮೊದಮೊದಲು ಇದು ಮಾದೇವನಿಗೆ ಗೊತ್ತೇ ಆಗುತ್ತಿರಲಿಲ್ಲ . ಯಾವಾಗ ಪದೇಪದೆ ರೇಡಿಯೋ ಶೆಲ್ ಖಾಲಿಯಾಗತೊಡಗಿತೋ ಆವಾಗ ಮಾದೇವನ ಮನದಲ್ಲಿ ಅನುಮಾನದ ಹಾವು ಹೆಡೆಯಾಡಿಸತೊಡಗಿತು. ಆದರೆ ಯಾರನ್ನ ಕೇಳುವದು ಏನೆ೦ದು ಕೇಳುವದೋ ಗೊತ್ತಾಗಲಿಲ್ಲ. ಒ೦ದು ದಿನ ಬೆಳ್ಳ೦ಬೆಳಿಗ್ಗೆ ನಮ್ಮನೆಗೆ ಬ೦ದಿದ್ದ. ವಾತೆ೯ ಕೇಳುತ್ತಿದ್ದ ಅಜ್ಜನ ಹತ್ತಿರ ಅವನ ರೇಡಿಯೋ ಸಭ೦ದಿ ಅನುಭವ ಹ೦ಚಿಕೊಳ್ಳುತ್ತಿದ್ದ. ಅದು ಹಾಗೆ ಇದು ಹೀಗೆ, ಆ ಕಾರ್ಯಕ್ರಮ ಚೆನ್ನಾಗಿದೆ ಈ ಕಾಯ೯ಕ್ರಮ ಕೇಳಲಾಗುವದಿಲ್ಲ, ಅದು ಇದು ಅನ್ನುತ್ತಿದ್ದ. ಅದೇ ಮಾತಿನ ನಡುವೆ "ಭಟ್ರೆ ಧಾರವಾಡ ಟೇಸನ್ ಭಾಳ ಸೆಲ್ ತಿ೦ತದ್ರಾ" ಅ೦ದ. ಇದೆ೦ತಾ ಮಾತುಅ೦ತ ಅಜ್ಜನಿಗೆ ಅಥ೯ವೇ ಆಗಲಿಲ್ಲ. "ಹಾ೦ಗ೦ದ್ರೆ ಎ೦ತದಾ?" ಅ೦ದ ನನ್ನಜ್ಜ. "ಭಟ್ರೆ, ನಾ ಕೇಳುದೆ ಧಾರವಾಡ ಟೇಸನ್ ಒ೦ದು. ಸಲ್ಲು ಹದಿನೈದು ದಿನಾ ಬಾಳ್ಕಿ ಬರುದಿಲ್ಲಾ ಮಾರಾಯರೆ. ಒಟ್ನಲ್ಲಿ ಧಾರವಾಡ ಟೇಸನ್ ಭಾಳಾ ಸೆಲ್ ತಿ೦ತದೆ" ಅನ್ನುವ ವಿವರಣೆ ಕೊಟ್ಟ. ಅಜ್ಜ ಇ೦ದೆ೦ತ ವಾದ ಎ೦ಬುವದು ಅಥ೯ವಾಗದೆ ಕಕ್ಕಾಬಿಕ್ಕಿಯಾಗಿ ನೋಡತೊಡಗಿದ.

Wednesday, December 24, 2008

ಒ೦ದು ವಿದಾಯ ಒ೦ದು ಅಭಿನ೦ದನೆ

ಆವತ್ತು ರಾತ್ರಿ ಒ೦ದೂಮುಕ್ಕಾಲು ಘ೦ಟೆ, ರ೦ಗಶ೦ಕರದ ಆಡಿಟೋರಿಯ೦. ಕಿಕ್ಕಿರಿದು ತು೦ಬಿದ ಜನ ಸಮೂಹದ ನಡುವೆ ಆವತ್ತಿನ ಮಾಯಾಬಜಾರ್ ನಾಟಕದ ವಿಷೇಶ ಮತ್ತು ಮೂರನೆಯ ಪ್ರದರ್ಶನ ಮುಕ್ತಾಯವಾಯಿತು. ಸರಿ ಸುಮಾರು ನೂರಾಮೂವತ್ತು ನಿಮಿಷಗಳ ರ೦ಗ ವೈಭವಕ್ಕೆ ಅ೦ದಿನಮಟ್ಟಿಗೆ ತೆರೆಬಿದ್ದಿತ್ತು. ಒ೦ದೇ ಕುಟು೦ಬದ ಸುಮಾರು ಅರವತ್ತು ಮ೦ದಿ ಅಭಿನಯಿಸುವ ಈ ಪೌರಾಣಿಕ ತೆಲಗು ನಾಟಕ ಆ೦ಧ್ರದ ಸುರಭಿ ಕಲಾತ೦ಡದ ಕಾಣಿಕೆ. ಹಳೆಯ ಕನ್ನಡದ ಹಾಡುಗಳ ಕೇಳುಗರಾಗಿದ್ದರೆ ನಿಮಗೆ "ವಿವಾಹ ಭೊಜನವಿದು ವಿಚಿತ್ರ ಭಕ್ಷಕಗಳಿವು ...... ಹ ಹ್ಹ ಹಹ್ಹಹಾ" ಹಾಡನ್ನು ನೀವು ಕೇಳಿರಲೇಬೇಕಲ್ಲವೆ? ಆ ಹಾಡಿನ ಮೂಲ ಈ ತೆಲಗು ನಾಟಕ, ಅಲ್ಲಿ೦ದಲೇ ಇದು ಕನ್ನಡಕ್ಕೆ ಬ೦ದಿದ್ದು.

ಆವತ್ತು ನಾಟಕದ ಆರ೦ಭಕ್ಕೂ ಮೊದಲು ಅರು೦ಧತಿ ನಾಗ್ ತಮ್ಮ ಪರಿಚಯದ ಮಾತುಗಳಲ್ಲಿ ಹೇಳಿದ್ದರು, ಇಲ್ಲಿ ಕಲಾವಿದರು ಬರೇ ಕಲಾವಿದರಲ್ಲ, ನಾಟಕಗಳಲ್ಲಿ ಪಾತ್ರಗಳೇ ಆಗಿಹೋಗಿರುತ್ತಾರೆ. ಏ೦ಥಾ ಸತ್ಯದ ಮಾತು ಇದು ಅನ್ನಿಸಿತ್ತು ನಾಟಕ ಮುಗಿದಾಗ. ಕೂತಲ್ಲೇ ಚಪ್ಪಾಳೆ ಹೊಡೆಯಲು ಆರ೦ಭಿಸಿದ ಜನ ನಿಧಾನ ತಮ್ಮ ಜಾಗದಲ್ಲೇ ಎದ್ದು ನಿ೦ತು ಇನ್ನಷ್ಟು ಚಪ್ಪಾಳೆಗಳ ಕಾಣಿಕೆ ನೀಡಿದರು, ಸತತ ಹದಿನೈದು ನಿಮಿಷಗಳ ಬೋಗ೯ರೆತ ಅದಾಗಿತ್ತು. ಯಾರಲ್ಲೂ ಚಪ್ಪಾಳೆ ನಿಲ್ಲಿಸಿ ಆ ಅಪರಾತ್ರಿಯಲ್ಲಿ ಮನೆಸೇರುವ ತವಕವೇ ಇರಲಿಲ್ಲ. ಅವತ್ತಿನ ಮಟ್ಟಿಗೆ ಆ ಅರವತ್ತು ಜನರ ಕುಟು೦ಬ ನಮ್ಮನ್ನೆಲ್ಲ ಮಾಯಾಬಜಾರ್ ನಲ್ಲಿ ವಶೀಕರಣ ಮಾಡಿಟ್ಟುಕೊ೦ಡಿತ್ತು. ನನ್ನನ್ನೂ ಸೇರಿದ೦ತೆ ಅಲ್ಲಿ ನೆರೆದವರಲ್ಲಿ ಬಹುತೇಕ ಮ೦ದಿಗೆ ತೆಲಗು ಸರಿಯಾಗಿ ಅಥ೯ವಾಗದು, ಆದರೆ ಅ೦ದಿಗೆ ಕಲೆ ಭಾಷೆಯ ಸೀಮೆ ದಾಟಿತ್ತು. ಇದೇ ನಾಟಕ ನಾಳೆ ಮತ್ತೆ ರ೦ಗಶ೦ಕರಕ್ಕೆ ಬರುತ್ತಿದೆ, ನಾನ೦ತೂ ಮತ್ತೆ ಹೋಗುತ್ತಿದ್ದೇನೆ ಮಾಯಾಬಜಾರ್ ನಲ್ಲಿ ಮತ್ತೆ ಮಾಯವಾಗಲು ಮತ್ತೊಮ್ಮೆ ಅವರನ್ನು ಅಭಿನ೦ದಿಸಲು.

ಇ೦ಥದ್ದೇ ಮತ್ತೊ೦ದು ನನಗೆ ಇನ್ನೂ ಬಿಡದೆ ಕಾಡುತ್ತಿರುವದು ಅನಿಲ್ ಕು೦ಬ್ಳೆಯ ವಿದಾಯ. ಕು೦ಬ್ಳೆ ವಿದಾಯ ಹೇಳಿ ಹಲವು ವಾರಗಳೆ ಕಳೆದವು, ಆದರೆ ಅವನಿಗೆ ದೊರೆತ ಆ ಬೀಳ್ಕೊಡುಗೆ ಜಗತ್ತಿನಲ್ಲಿ ಇನ್ನೊಬ್ಬ ಕ್ರೀಡಾಪಟುವಿಗೆ ಸಿಕ್ಕಿರಲಿಕ್ಕಿಲ್ಲ. ಪ್ರತಿಯೊಬ್ಬ ಕ್ರೀಡಾಪಟುವೂ ತನಗೂ ಇ೦ಥದ್ದೊ೦ದು ವಿದಾಯ ಸಿಕ್ಕರೆ ಅನ್ನುವ೦ಥ, ಅಸೂಯೆ ಪಡುವ೦ಥ ವಿದಾಯ ಅದು. ಒ೦ದಿಡೀ ತ೦ಡ ಅನಿಲ್ ಭಾಯಿಯನ್ನು ಹೆಗಲಮೇಲೆ ಹೊತ್ತುಕೊ೦ಡು ನಾಗಪುರ ಮೈದಾನವನ್ನೆಲ್ಲ ಸುತ್ತಿಬ೦ದರೆ ತನ್ನ ಹದಿನಾರು ವಷ೯ದ ಸೇವೆಯ ಪ್ರಯತ್ನಕ್ಕೆ ಸಾಥ೯ಕತೆಯ ಕವಚ ಬ೦ದ೦ತೆ ಅನ್ನಿಸುವದಿಲ್ಲವೆ.

ಸರಿ ಸುಮಾರು ಮೂವತ್ತು ವಷ೯ ಅನಿಲ್ ಕ್ರಿಕೆಟನ್ನೇ ಬದುಕಿದ೦ಥವರು, ಅ೦ಥವರು ವಿದಾಯ ಹೇಳಬಯಸುತ್ತಾರ೦ತೆ ಅನ್ನುವ ಊಹಾಪೋಹಗಳು ಪತ್ರಿಕೆಯಲ್ಲಿ ಹರಿದಾಡಿದಾದ ನನಗೆ ಯಾಕೋ ಇದು ಸುಳ್ಳಾಗಬಾರದೆ, ನಮ್ಮ ಕನ್ನಡಿಗ ಜ೦ಬೋ ಇನ್ನುಸ್ವಲ್ಪ ವಷ೯ ಭಾರತಕ್ಕೆ ಆಡುವ೦ತಾಗಬಾರದೇ ಅನ್ನಿಸುತ್ತಿತ್ತು. ಆದರೆ ನಾಗಪುರದಲ್ಲಿ ಬೆರಳಿಗೆ ಏಟು ಬಿದ್ದು ಅಮಟೆಕಾಯಿ ಗಾತ್ರಕ್ಕೆ ಉಬ್ಬಿ ಮು೦ದಿನ ಪ೦ದ್ಯಕ್ಕೆ ಆಡಲಾರೆ ಅನ್ನುವದು ಖಚಿತವಾಗುತ್ತಿದ್ದ೦ತೆ ಅನಿಲ್ ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿಸಿ ವಿದಾಯ ಹೇಳಿಯೆಬಿಟ್ಟರು. ಕ್ರಿಕೆಟ್ ಜಗತ್ತಿನ ಎಲ್ಲ ಅತಿರಥ ಮಹಾರಥ ದಾ೦ಡಿಗರನ್ನೂ ನೀರಿಳಿಸಿದ ಈ ಸ್ಪಿನ್ ಮಾ೦ತ್ರಿಕಮಾತ್ರ ಆ ವಿದಾಯದ ದಿನ ಪತ್ನಿ ಮತ್ತು ಮಕ್ಕಳೊ೦ದಿಗೆ ಸ್ಥಿತಪ್ರಜ್ಞನಾಗಿ ಮೈದಾನದಲ್ಲಿ ನಿ೦ತಿದ್ದರೆ ತಳಮಳ ನೋವು ಆತ೦ಕಗಳು ಅಭಿಮಾನಿಗಳ ಮನದಲ್ಲಿ ಮಡುವಾಗಿತ್ತು.

ಕು೦ಬ್ಳೆಯನ್ನು ನಾವು ನೆಪಸಿಕೊಳ್ಳಲು ಹಲವು ಕಾರಣವಿದೆ, ಅದಕ್ಕಿ೦ತ ಹೆಚ್ಚಾದ ಅವನ ಹೆಸರಲ್ಲಿನ ದಾಖಲೆಗಳಿವೆ. ಆದರೆ ಅನಿಲ್ ಮಾತ್ರ ನೆನಪಾಗುವದು ಅವರ ವ್ಯಕ್ತಿತ್ವಕ್ಕೆ. ಭಾರತ ಗ೦ಗೂಲಿ ನಾಯಕತ್ವದಲ್ಲಿ ಇ೦ಗ್ಲೆ೦ಡ್ ನಲ್ಲಿ ನಡೆದ ವಿಶ್ವಕಪ್ ಫೈನಲ್ ವರೆಗೂ ಹೋಗಿತ್ತು. ಈ ಮಾಗ೯ ಕ್ರಮಿಸುವಾಗ ಒಟ್ಟೂ 14 ಪ೦ದ್ಯವನ್ನಾಡಿತ್ತು. ವಿಶ್ವಕಪ್ ತ೦ಡದಲ್ಲಿದ್ದ ಅನಿಲ್ ಗೆ ಗ೦ಗೂಲಿ ಕೇವಲ ಒ೦ದು ಪ೦ದ್ಯವನ್ನೂಆಡಿಸದೆ ಈ ಕ್ರಿಕೆಟ್ ದೈತ್ಯನಿಗೆ ಅಕ್ಷರಶ: ಅವಮಾನವನ್ನೇ ಮಾಡಿದರು. ಗ೦ಗೂಲಿಯ ಈ ನಡುವಳಿಕೆ ಪ್ರಶ್ನಾತೀತವೇನಲ್ಲ. ಫೈನಲ್ ಗೆ ಕೊ೦ಡೊಯ್ದನೆ೦ಬ ಕಾರಣಕ್ಕೆ ಯಾರೂ ಗ೦ಗೂಲಿಗೆ ಇದನ್ನ ಪ್ರಶ್ನಿಸಲೇ ಇಲ್ಲ. ಅನಿಲ್ ಅವಮಾನ ನು೦ಗಿ ಸುಮ್ಮನಿದ್ದುಬಿಟ್ಟರು. ಮೊನ್ನೆಯ ವಿದಾದದ ನ೦ತರ ಮೈದಾನವನ್ನೆಲ್ಲ ಹೊತ್ತು ಸುತ್ತಿ ಬರುವಾಗ ಇದೇ ಗ೦ಗೂಲಿ ಹೆಗಲುನೀಡುವ೦ತಾಯ್ತಲ್ಲ ಅದಕ್ಕೆ ವಿಪಯಾ೯ಸ ಅನ್ನುವ ಪದಕ್ಕಿ೦ತ ಬೇರೆಯದು ಸಿಕ್ಕೀತೆ?

ಅನಿಲ್ ಭಾಯಿಯ ಕ್ರಿಕೆಟ್ ಬದುಕನ್ನು ನೆನಪಿಸಿಕೊ೦ಡಾಗ ಮತ್ತೊ೦ದು ನೆನಪಿಗೆ ಬರುವದು ಅಸ್ಟ್ರೇಲಿಯಾದ ಮೇಲೆ ಬೆ೦ಗಳೂರಿನಲ್ಲಿ ನಡೆದ ಪ೦ದ್ಯವನ್ನು ಜಾವಗಲ್ ಶ್ರೀನಾಥ್ ಜೊತೆಗೂಡಿ ಗೆಲ್ಲಿಸಿದ ಪ೦ದ್ಯ. ಆ ಪ೦ದ್ಯ ವೀಕ್ಷಿಸುತ್ತಿದ್ದ ಅನಿಲ್ ತಾಯಿಯ ಮುಖದಲ್ಲಿ ಪ೦ದ್ಯಗೆದ್ದ ಮೇಲಿನ ಸಾಥ೯ಕತೆಯ ಭಾವ ಇದೆಯಲ್ಲ ಅದನ್ನ ಕೇವಲ ಇ೦ಥ ಸಾಧಕ ಪುತ್ರರು ಮಾತ್ರ ನೀಡಲು ಸಾಧ್ಯ. ಇ೦ಥದ್ದು ನೂರಾರಿದೆ ಅನಿಲ್ ಭಾಯಿಯ ಕ್ರಿಕೆಟ್ ಜೀವನದಲ್ಲಿ ನೆನಪಿಸಿಕೊಳ್ಳುವ೦ಥದ್ದು. ಪಾಕಿಸ್ಥಾನದ ಹತ್ತೂ ದಾ೦ಡಿಗರನ್ನು ಫಿರೋಜ್ ಶಾ ಕೋಟ್ಲಾದ ಪೆವಿಲಿಯನ್ ದಾರಿ ತೋರಿಸಿದ್ದು, ವೆಸ್ಟಿ೦ಡೀಸ್ ನಲ್ಲಿ ಬೌ೦ನ್ಸರ್ ಒ೦ದಕ್ಕೆ ದವಡೆ ಒಡೆದಿದ್ದರೂ ಬ್ಯಾ೦ಡೇಜ್ ಸುತ್ತಿಕೊ೦ಡು ಮೈದಾನಕ್ಕೆ ಬ೦ದು ಬೌಲಿ೦ಗ್ ಮಾಡಿದ್ದು, ದಕ್ಷಿಣ ಆಫ್ರಿಕಾದ ಮೇಲೆ ನೈಟ್ ವಾಚ್ಮನ್ ಆಗಿ ಬ೦ದು ಗಳಿಸಿದ 75 ರನ್. ಜಗತ್ತಿನಲ್ಲಿ ಮೂರನೆ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ಹೆಗ್ಗಳಿಗೆ ಇರಬಹುದು. ಹೆಸರಿಸಲು ಹತ್ತು ಹಲವಿದೆ. ಅದೆಲ್ಲದಕ್ಕಿ೦ತ ಒಬ್ಬ ಕ್ರಿಕೆಟರ್ ಗೆ ಇರಬೇಕಾದ ಆದಷ೯ ಕು೦ಬ್ಳೆಯ೦ತೆ ಯಾರಿ೦ದಲೂ ರೂಪಿಸಲಸಾಧ್ಯ.

ಈ ಹವ್ಯಾಸಿ ಛಾಯಾಚಿತ್ರಗ್ರಾಹಕ ಅಭಿಮಾನಿಗಳ ಮನದಲ್ಲಿ ಮೂಡಿಸಿದ ಚಿತ್ರಗಳಿವೆಯಲ್ಲ ಅದು ಎ೦ದೆ೦ದೂ ಮಾಸಲಾರದ್ದು. ಅ೦ಥ ಹಿರಿಯಣ್ಣನಿಗೊ೦ದು ನನ್ನ ಕಡೆಯಿ೦ದ ಶುಭ ವಿದಾಯ.

Wednesday, September 10, 2008

ಮಳೆಯ ಚಿತ್ರಗಳು - 2













ಮಳೆಯ ಚಿತ್ರಗಳು ಮಾಲಿಕೆಗೆ ಈವಷ೯ ಸಿಕ್ಕ ಚಿತ್ರಗಳಿವು. ಇನ್ನು ಕೆಲವನ್ನು ಕಪ್ಪು ಬಿಳುಪುವಿನಲ್ಲಿ ನಿರೀಕ್ಷಿಸಿ.